ಜಿಲ್ಲೆ

ಮೈಸೂರಿನಲ್ಲಿ ನೀರಿನ ದರ ಪರಿಷ್ಕರಣೆಗೆ ಬ್ರೇಕ್?

  • ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ
  • 10 ವರ್ಷಗಳ ನಂತರ ದರ ಏರಿಕೆಗೆ ಪ್ರಸ್ತಾಪ

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ೧೦ ವರ್ಷಗಳ ನಂತರ ನೀರಿನ ದರ ಪರಿಷ್ಕರಣೆ ಮಾಡಲು ಮುಂದಾಗಿದ್ದು, ೨೦೨೩ರಲ್ಲಿ ವಿಧಾನಸಭಾ ಚುನಾವಣೆ ಹಾಗೂ ನಗರ ಪಾಲಿಕೆ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಪಾಲಿಕೆ ಪ್ರಸಕ್ತ ವರ್ಷದ ಜನವರಿ ತಿಂಗಳಿನಲ್ಲಿಯೇ ದರ ಪರಿಷ್ಕರಣೆಗೆ ಮುಂದಾಗಿತ್ತು. ಆದರೆ, ಮೇಯರ್ ಚುನಾವಣೆ ವಿಳಂಬ ಹಾಗೂ ನಾನಾ ಕಾರಣಗಳಿಂದ ದರ ಪರಿಷ್ಕರಣೆ ವಿಷಯ ಕೌನ್ಸಿಲ್ ಮುಂದೆ ಬರಲಿಲ್ಲ. ಈ ಬಾರಿಯ ಕೌನ್ಸಿಲ್‌ನಲ್ಲಿ ದರ ಏರಿಕೆಯ ಪ್ರಸ್ತಾಪ ಬಂದರೂ ಸಮಯಾವಕಾಶದ ಕೊರತೆಯಿಂದ ಚರ್ಚೆಗೆ ಬರಲಿಲ್ಲ. ಆದರೆ, ೨೦೨೩ ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ಕಡಿಮೆ ಇದೆ.

ನಗರ ಪಾಲಿಕೆ ಕಡೆಯದಾಗಿ ೨೦೧೨ರಲ್ಲಿ ನೀರಿನ ಶುಲ್ಕ ಪರಿಷ್ಕರಣೆ ಮಾಡಿತ್ತು. ಒಂದು ದಶಕದ ಅವಧಿಯಲ್ಲಿ ನೀರಿನ ಶುದ್ಧೀಕರಣದ ವೆಚ್ಚ, ಪೂರೈಕೆಯ ವೆಚ್ಚ, ವಿದ್ಯುತ್ ಬಿಲ್, ಸಿಬ್ಬಂದಿ ವೇತನ, ಇಂಧನ ಬೆಲೆಗಳು ದುಪ್ಪಟ್ಟಾಗಿವೆ. ಸರ್ಕಾರದ ನಿರ್ದೇಶನ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಣೆಯಾಬೇಕಾಗಿದೆ. ೨೦೨೧ ಜನವರಿ ತಿಂಗಳಿನಲ್ಲಿ ನಗರದಲ್ಲಿ ಗೃಹೇತರ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆಯ ನಿರಿನ ಮತ್ತು ಒಳಚರಂಡಿ ಶುಲ್ಕವನ್ನು ಶೇ.೨೦ ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಶೇ.೯೦ ರಷ್ಟು ಸಂಪರ್ಕಗಳು ಗೃಹ ಬಳಕೆಯಲ್ಲಿ ಇರುವುದರಿಂದ ಗೃಹೇತರ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ಶುಲ್ಕ ಹೆಚ್ಚಳದಿಂದ ಪಾಲಿಕೆಗೆ ಪರಿಣಾಮಕಾರಿಯಾಗಿ ನೀರಿನ ಶುಲ್ಕದ ಆದಾಯ ಹೆಚ್ಚಳವಾಗಿಲ್ಲ. ಈ ಹಿನ್ನೆಲೆಯಲ್ಲಿ ಗೃಹ ಬಳಕೆಯ ನೀರಿನ ದರವನ್ನು ಸಹ ಏರಿಕೆ ಮಾಡಲು ಪಾಲಿಕೆ ಮುಂದಾಗಿದೆ.

ಪಾಲಿಕೆಯ ಹೊರೆ ಹೆಚ್ಚಳ:
ನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಎಡಿಬಿ ಸಾಲದ ಬಾಕಿ, ನೀರಾವರಿ ನಿಗಮದ ನೀರಿನ ಶುಲ್ಕದ ಬಾಕಿ, ಮಾಲಿನ್ಯ ನಿಯಂತ್ರಣ ಮಂಡಳಿಯ ನೀರಿನ ಉಪಕರದ ಬಾಕಿ, ನೀರಿನ ಶುದ್ಧೀಕರಣ ಹಾಗೂ ಪೂರೈಕೆಯ ನಿರ್ವಹಣಾ ವೆಚ್ಚ, ವಿದ್ಯುತ್ ವೆಚ್ಚ, ಸಿಬ್ಬಂದಿ ವೇತನ ಅಂಶಗಳು ಒಳಗೊಂಡಂತೆ ನೀರು ಸರಬರಾಜು ವಿಭಾಗ ವಾರ್ಷಿಕ ೧೨೫ ಕೋಟಿ ರೂ. ಹೊರೆಯನ್ನು ಅನುಭವಿಸುತ್ತಿದೆ. ಅಲ್ಲದೆ, ಒಳಚರಂಡಿ ವಿಭಾಗದ ವಾರ್ಷಿಕ ನಿರ್ವಹಣಾ ೪೫ ಕೋಟಿ ರೂ.ಗಳಷ್ಟು ಇವೆ. ಆದರೆ, ನೀರಿನ ತೆರಿಗೆ ವಸೂಲಾತಿಯ ಮೂಲಕ ೨೦೨೦-೨೧ನೇ ಸಾಲಿನಲ್ಲಿ ೫೦ ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಒಟ್ಟಾರೆ ಪಾಲಿಕೆಗೆ ನೀರು ಪೂರೈಕೆ ವಿಭಾಗದಿಂದ ವಾರ್ಷಿಕ ೧೨೦ ಕೋಟಿ ರೂ. ಹೊರೆ ಆಗುತ್ತಿದ್ದು, ಈ ಮೊತ್ತವನ್ನು ಸರಿದೂಗಿಸಲು ಪಾಲಿಕೆ ದರ ಪರಿಷ್ಕರಣೆ ಮಾಡುವ ಆಲೋಚನೆಯಲ್ಲಿ ಇದೆ.
ವಿದ್ಯುತ್ ವೆಚ್ಚವನ್ನು ರಾಜ್ಯ ಸರ್ಕಾರ ಎಸ್‌ಎಫ್‌ಸಿ ಅನುದಾನದಲ್ಲಿ ಭರಿಸುತ್ತಿದ್ದರೂ ಸಹ ನೀರು ಸರಬರಾಜು ಹಾಗೂ ಒಳಚರಂಡಿ ವಿಭಾಗದ ನಿರ್ವಹಣಾ ವೆಚ್ಚ ಹಾಗೂ ಇತರೆ ಯೋಜನಾ ವೆಚ್ಚಗಳನ್ನು ಪ್ರಸ್ತುತ ಸಂಗ್ರಹ ಆಗುತ್ತಿರುವ ನೀರಿನ ಶುಲ್ಕದ ಆದಾಯದಲ್ಲಿ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರು ಸರಬರಾಜು ಹಾಗೂ ಒಳಚರಂಡಿಗೆ ಸಂಬಂಧಿಸಿದ ಹೊಸ ಕಾಮಗಾರಿಗಳನ್ನು ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ದರ ಪರಿಷ್ಕರಣೆ ಪಾಲಿಕೆಗೆ ಅನಿವಾರ್ಯವಾಗಿದೆ. ಇಷ್ಟೆಲ್ಲ ಹೊರೆ ಇದ್ದರೂ ವಿಧಾನಸಭಾ ಚುನಾವಣೆ ವೇಳೆಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಕಡಿಮೆ ಇದೆ.

ದರ ಪರಿಷ್ಕರಣೆಯ ವಿವರ
ಪ್ರಸ್ತುತ ನೀರಿನ ಬಳಕೆಗೆ ನಿಗದಿತ ಶುಲ್ಕ (ಮಿನಿಮಮ್ ಚಾರ್ಜಸ್) ೧೨೫ ರೂ. ವಿಧಿಸಲಾಗುತ್ತಿದ್ದು, ದರ ಏರಿಕೆಗೆ ಅನುಮೋದನೆ ದೊರೆತರೆ ೨೦೦ ರೂ.ಗೆ ಏರಿಕೆಯಾಗಲಿದೆ. ಅಲ್ಲದೆ ೦-೨೫,೦೦೦ ಲೀಟರ್ ನೀರಿನ ಬಳಕೆಗೆ ೨೦೦ ರೂ. ಫ್ಲಾಟ್ ರೇಟ್ ವಿಧಿಸಲಾಗುತ್ತದೆ (ಪ್ರಸ್ತುತ ಈ ಫ್ಲಾಟ್ ರೇಟ್ ಕೇವಲ ೫ ರೂ.ಮಾತ್ರ ಇದೆ). ೨೫,೦೦೦ ಲೀಟರ್ ಮೇಲ್ಪಟ್ಟು ನೀರು ಬಳಕೆ ಮಾಡಿದರೆ ವಿವಿಧ ಸ್ಲಾೃಬ್‌ಗಳಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪವಿದೆ.

೨೫,೦೦೧ ರಿಂದ ೫೦,೦೦೦ ಲೀಟರ್‌ವರೆಗೆ ನೀರು ಬಳಕೆ ಮಾಡಿದರೆ ಪ್ರಸ್ತುತ ೮ ರೂ.ದರ ವಿಧಿಸಲಾಗುತ್ತಿದ್ದು, ದರ ಪರಿಷ್ಕಣೆಯಾದರೆ ೧೨ ರೂ.ಗೆ ಏರಿಕೆಯಾಗಲಿದೆ. ಅದೇ ರೀತಿ ೫೦,೦೦೦೧ ರಿಂದ ೭೫,೦೦೦ ಲೀಟರ್ ಬಳಕೆ ದರ ಪ್ರಸ್ತುತ ೧೨ ರೂ. ಇದ್ದು, ೧೭ ರೂ.ಗೆ ಏರಿಕೆ ಮಾಡುವ ಪ್ರಸ್ತಾವನೆ ಇದೆ. ೭೫,೦೦೧ ರಿಂದ ೧,೦೦,೦೦೦ ಲೀಟರ್ ಬಳಕೆ ದರವನ್ನು ೧೬ ರೂ.ನಿಂದ ೨೨ ರೂ.ಗೆ, ೧,೦೦,೦೦೧ ಲೀಟರ್ ಮೇಲ್ಪಟ್ಟ ನೀರಿನ ಬಳಕೆಯ ದರವನ್ನು ೨೦ ರೂ.ನಿಂದ ೨೭ ರೂ.ಗೆ ಏರಿಸುವ ಪ್ರಸ್ತಾವ ಇದೆ. ಪರಿಷ್ಕೃತ ದರ ಜಾರಿಯಾದರ ಇನ್ನು ಮುಂದೆ ಮಾಸಿಕ ೨೫,೦೦೦ ಲೀಟರ್ ಒಳಗೆ ನೀರು ಬಳಕೆ ಮಾಡುವ ಗೃಹ ಬಳಕೆಯ ಸಂಪರ್ಕಕ್ಕೆ ೮೦ ರೂ. ಯುಜಿಡಿ ಶುಲ್ಕ ಪಾವತಿಸಬೇಕು. ಒಂದು ವೇಳೆ ೨೫,೦೦೦ ಲೀಟರ್ ಮೇಲ್ಪಟ್ಟು ನೀರು ಬಳಕೆ ಮಾಡಿದರೆ ನೀರಿನ ಬಳಕೆಯ ಪ್ರಮಾಣದ ಆಧಾರದ ಮೇಲೆ ಶೇ.೪೦ ರಷ್ಟು ಶುಲ್ಕ ವಿಧಿಸಲಾಗುವುದು. ಈ ಯುಜಿಡಿ ಶುಲ್ಕ ನೀರಿನ ಬಿಲ್‌ನೊಂದಿಗೆ ಬರಲಿದೆ.

''ನಗರದಲ್ಲಿ ೨೦೨೧ರಲ್ಲಿ ಗೃಹೇತರ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆಯ ನೀರಿನ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಆದರೆ, ಗೃಹ ಬಳಕೆಯ ನೀರಿನ ದರ ೧೦ ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡುವ ಪ್ರಸ್ತಾವವಿದ್ದು, ಇದಕ್ಕೆ ಕೌನ್ಸಿಲ್ ಅನುಮೋದನೆಯ ಅವಶ್ಯಕತೆ ಇದೆ.''
ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ