ಬೆಂಗಳೂರು ಗ್ರಾಮಾಂತರ: ಎಂಟು ತಿಂಗಳ ಬಳಿಕ ಹೊಸಕೋಟೆ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಗಳಿಗೆ ಕೂಡಿ ಬಂದಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿವೆ.
ಬಹುಮತದೊಂದಿಗೆ ಬಿಜೆಪಿ ನಗರಸಭೆ ಚುಕ್ಕಾಣಿ ಹಿಡಿದಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಪಕ್ಷಗಳಿಂದ ಸ್ಪರ್ಧೆಯಿಲ್ಲವಾಗಿದೆ. ಬಿಜೆಪಿ ವರಿಷ್ಠರ ಆಣತಿಯಂತೆಯೇ ಸ್ಥಾನ ಭರ್ತಿಯಾಗಲಿದೆ ಎನ್ನಲಾಗಿದ್ದು, ಇದರಲ್ಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಶಿಾರಸು ಮಾಡುವ ಅಭ್ಯರ್ಥಿಗಳಿಗೇ ವರಿಷ್ಠರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂಬ ನಿರೀಕ್ಷೆ ದಟ್ಟವಾಗಿದೆ.
ತೆರೆಮರೆ ಕಸರತ್ತು: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೇಲ್ನೋಟಕ್ಕೆ ಪೈಪೋಟಿ ಕಂಡುಬರುತ್ತಿಲ್ಲವಾದರೂ ತೆರೆಮರೆಯಲ್ಲಿ ಹಲವು ಸದಸ್ಯರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತೆರೆಮರೆಯ ಕಸರತ್ತು ನಡೆಸಿದ್ದರೂ ಯಾರೂ ನೇರವಾಗಿ ಪಟ್ಟು ಹಿಡಿಯುವ ಲಕ್ಷಣ ಕಂಡುಬರುತ್ತಿಲ್ಲ.
ಬಿಜೆಪಿಯ 23 ಅಭ್ಯರ್ಥಿಗಳು ಜಯ: ನಗರಸಭೆಯ 31 ವಾರ್ಡ್‌ಗಳಿಗೆ 2020ರ ೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ 23 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಬಹುಮತದೊಂದಿಗೆ ಕಮಲ ಅಧಿಕಾರಕ್ಕೆ ಬಂದಿದೆ. ಭಾರತೀಯ ಪ್ರಜಾ ಪಾರ್ಟಿ 7 ಸ್ಥಾನ ಪಡೆದಿದೆ. ಎಸ್‌ಡಿಪಿಐ ಅಭ್ಯರ್ಥಿಯೊಬ್ಬರು ಜಯಗಳಿಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಒಂದೇ ಒಂದು ಸ್ಥಾನಗಿಟ್ಟಿಸಿಕೊಳ್ಳುವಲ್ಲೂ ವಿಲವಾಗಿದೆ.
ಮೂರನೇ ಬಾರಿ ಬಿಜೆಪಿ ಪಾಲು: ನಗರಸಭೆಗೂ ಮೊದಲು ಪುರಸಭೆಯಾಗಿದ್ದ ಹೊಸಕೋಟೆಯಲ್ಲಿ ಕಳೆದೆರಡು ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು, ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಪುರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದ್ದರು. ಬದಲಾದ ರಾಜಕೀಯ ವಿದ್ಯಾಮಾನದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಬಿಜೆಪಿಗೆ ಬಂದ ಬಳಿಕ ಎದುರಾದ ಮೊದಲ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿಡಿತವಿದ್ದದ್ದನ್ನು ಮತ್ತೆ ಬಿಜೆಪಿ ತೆಕ್ಕೆಗೆ ಸೆಳೆಯುವಲ್ಲಿ ಸಲರಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ: ರಾಜ್ಯ ಸರ್ಕಾರ ಸ್ಥಳೀಯ ಆಡಳಿತ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮೀಸಲಾತಿ ಪ್ರಕಟಿಸಿದ್ದು ಹೊಸಕೋಟೆ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಮತದಾನದ ವಿವರ:
ಒಟ್ಟು ಮತದಾರರ ಸಂಖ್ಯೆ: 47364
ಮತದಾನವಾಗಿದ್ದು: 35885
ಬಿಜೆಪಿ ಪಡೆದ ಮತ: 17623
ಭಾರತೀಯ ಪ್ರಜಾ ಪಾರ್ಟಿ:12389
ಸಮರ್ಥರಿಗೆ ಸ್ಥಾನ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ನಗರಸಭೆ ಸದಸ್ಯರು ಹಾಗೂ ಎಲ್ಲ ಮುಖಂಡರ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಿರಿತನ, ಎಷ್ಟು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಸಾರ್ವಜನಿಕ ಜೀವನದಲ್ಲಿ ಯಾವ ಅಭಿಪ್ರಾಯವಿದೆ, ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸಬಲ್ಲರೆ ದಕ್ಷ ಆಡಳಿತ ನೀಡಬಲ್ಲರೆ ಎಂಬುದನ್ನು ಪರಿಗಣಿಸಲಾಗುತ್ತದೆ, ಎಲ್ಲ ಆಯಾಮಗಳಲ್ಲೂ ಚರ್ಚಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತಂದು ಸ್ಥಾನಗಳನ್ನು ಅಂತಿಮಗೊಳಿಸಲಾಗುವುದು. ಜತೆಗೆ 5 ವರ್ಷದ ಅವಧಿಯಲ್ಲಿ ತಲಾ ಮೂವರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ 'ವಿಜಯವಾಣಿ'ಗೆ ತಿಳಿಸಿದ್ದಾರೆ.