ಗೌರಿಬಿದನೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ನೇತೃತ್ವದಲ್ಲಿ ನಗರದ ಶನಿಮಹಾತ್ಮ ಸ್ವಾಮಿ ದೇವಾಲಯದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ, ರಸ್ತೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ಶಿವಶಂಕರ ರೆಡ್ಡಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಾಮಮಾರ್ಗದ ಮೂಲಕ ಸರ್ಕಾರವನ್ನು ಉರುಲಿಸುವ ವ್ಯರ್ಥ ಸಾಹಸ ಮಾಡುತ್ತಿದ್ದಾರೆ. ಕೇಂದ್ರ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ. ರಾಜ್ಯಪಾಲರನ್ನು ಕೈಗೊಂಬೆಯಂತೆ ಬಳಸಿಕೊಳ್ಳಲಾಗುತ್ತಿದೆ. ಪಕ್ಷಾತೀತವಾಗಿ ನಡೆದುಕೊಳ್ಳಬೇಕಾದ ರಾಜ್ಯಪಾಲರು ಯಾವುದೋ ಪಕ್ಷದ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಹಾಗೂ ರಾಜ್ಯಪಾಲರು ನಡೆಸುತ್ತಿರುವ ಷಡ್ಯಂತ್ರ ಫಲ ನೀಡುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುತ್ತಿದ್ದು, ಒಂದು ವರ್ಷದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಮಾರು ಐದು ಕೋಟಿಗೂ ಹೆಚ್ಚು ಜನ ಸರ್ಕಾರದ ವಿವಿಧ ಯೋಜನೆಗಳ ಫಲ ಪಡೆದಿದ್ದಾರೆ. ಸಿದ್ದರಾಮಯ್ಯನವರು ನೇರ ನಿಷ್ಠುರವಾದಿ ರಾಜಕಾರಣಯಾಗಿದ್ದು, ಹಣ, ಆಸ್ತಿ ಮಾಡುವ ವ್ಯಕ್ತಿತ್ವ ಅವರದಲ್ಲ ಎಂದರು.
ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿಲ್ಲ
ಕೇಂದ್ರದಲ್ಲಿ ಬಿಜೆಪಿ ಪಕ್ಷವು ವಿರೋಧ ಪಕ್ಷದ ಮುಖ್ಯಮಂತ್ರಿಗಳು ಸೇರಿ ವಿರೋಧ ಪಕ್ಷದ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ. 70 ವರ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 60 ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದೆ. ಆದರೆ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಅಸ್ಥಿರಗೊಳಿಸಲು ಬಿಜೆಪಿ ಹೊರಟಿದೆ ಎಂದು ಎನ್.ಎಚ್. ಶಿವಶಂಕರರೆಡ್ಡಿ ದೂರಿದರು.
ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಸ್ಕಾಂ ಗಂಗಾಧರಪ್ಪ, ತಾರಾನಾಥ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶ್ವತ್ಥನಾಯಣ್ ಮಾತನಾಡಿದರು. ಮುಖಂಡರಾದ ಎಚ್.ಎನ್. ಪ್ರಕಾಶ್‌ರೆಡ್ಡಿ, ಮರಳೂರು ಹನುಮಂತರೆಡ್ಡಿ, ಶ್ರೀನಿವಾಸ್, ಕಾರ್ತಿಕ್ ಸೇರಿ ಇತರ ಮುಖಂಡರು, ನಗರಸಭೆ ಸದಸ್ಯರು ಹಾಜರಿದ್ದರು.
ಹಡಗು ರಂಧ್ರ ಮಾಡಿದರೆ ಎಲ್ಲ ಮುಳುಗುತ್ತೇವೆ
ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ನೀಡಿದರೂ ಹೆಣ್ಣು ಮಕ್ಕಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಶಂಕರರೆಡ್ಡಿ, ಸಿದ್ದರಾಮಯ್ಯ ಅವರನ್ನು ಕಳೆದುಕೊಂಡರೆ ಬಡವರ ಹೊಟ್ಟೆ ಮೇಲೆ ಹೊಡೆದಂತೆ. ನಾವು ಅವರಿಗೆ ಶಕ್ತಿಯಾಗಿ ನಿಲ್ಲಬೇಕಿದೆ. ಪಕ್ಷದಲ್ಲಿ ನಾವು ಕಷ್ಟದ ಸ್ಥಿತಿಯಲ್ಲಿದ್ದೇವೆ. ಆದರೆ ನಿಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ. ಒಂದೇ ಹಡಗಿನಲ್ಲಿ ಎಲ್ಲರೂ ಹೋಗುತ್ತಿರುವಾಗ ರಂಧ್ರ ಕೊರೆಯುವ ಕೆಲಸ ಮಾಡಿದರೆ ಎಲ್ಲರೂ ಮುಳುಗುತ್ತೇವೆ. ಆದ್ದರಿಂದ ಸಮಾಧಾನದಿಂದ ಇದ್ದೇವೆ ಎಂದು ಮಾರ್ಮಿಕವಾಗಿ ಶಾಸಕ ಪುಟ್ಟಸ್ವಾಮಿ ಗೌಡ ಬಣದ ವಿರುದ್ಧ ಅಸಮಾಧಾನ ಹೊರಹಾಕಿದರು.
ಜನರಿಂದಲೇ ತಕ್ಕ ಉತ್ತರ ಸಿಗಲಿದೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮಾತನಾಡಿ, ಬಿಜೆಪಿ - ಜೆಡಿಎಸ್ ಏಜೆಂಟರಂತೆ ರಾಜ್ಯಪಾಲಕರು ನಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಶೋಷಿತ ಅಹಿಂದ ಸಮುದಾಯಗಳ ನಾಯಕ ಸಿದ್ದರಾಮಯ್ಯ ವಿರುದ್ಧ ಕುತಂತ್ರ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕೆಎಚ್‌ಪಿ ಬಣದಿಂದ 23ರಂದು ಶಕ್ತಿ ಪ್ರದರ್ಶನ
ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ರಾಜ್ಯ ಸರ್ಕಾರಕ್ಕೆ ಬೆಂಬಲ ಘೋಷಿಸಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಬಣ ಹಾಗೂ ಪುಟ್ಟಸ್ವಾಮಿ ಗೌಡರ ಬಣದ ನಡುವೆ ಇಂದಿಗೂ ಹೊಂದಾಣಿಕೆ ಆಗುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳುವ ಯಾವುದೇ ಚಟುವಟಿಕೆಗಳಲ್ಲಿ ಶಾಸಕ ಪುಟ್ಟಸ್ವಾಮಿಗೌಡ ಆಗಲಿ ಅವರ ಬೆಂಬಲಿಗರಾಗಲಿ ಭಾಗವಹಿಸುತ್ತಿಲ್ಲ. ಇಂದು ನಡೆದ ಪ್ರತಿಭಟನೆಯಲ್ಲಿ ಕೂಡ ಪುಟ್ಟಸ್ವಾಮಿಗೌಡ ಬಣದ ಯಾರೂ ಭಾಗವಹಿಸಿರಲಿಲ್ಲ. ಆ.23ರಂದು ಪ್ರತ್ಯೇಕವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡಲು ಪುಟ್ಟಸ್ವಾಮಿಗೌಡ ಬೆಂಬಲಿಗರು ನಿರ್ಧರಿಸಿದ್ದಾರೆ.