ಕೆ.ಸಂಜೀವ ಆರ್ಡಿ ಬೈಂದೂರು-ವಿರಾಜಪೇಟೆ ಪ್ರಮುಖ ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ-ಮರೂರು ಕ್ರಾಸ್ ಬಳಿಯ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಾಜ್ಯ ಹೆದ್ದಾರಿಯ ಅಲ್ಬಾಡಿ ಮೂಲಕ ಕುಂದಾಪುರ, ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ದೂರದ ಪ್ರಮುಖ ಸ್ಥಳಗಳಿಗೆ ಹಾಗೂ ಸ್ಥಳೀಯ ಊರುಗಳಿಗೆ, ಪೇಟೆಗಳಿಗೆ ಈ ರಸ್ತೆಯಲೇ ಪ್ರಮುಖ ಸಂಪರ್ಕ ಕೊಂಡಿ. ಈ ಮಾರ್ಗದಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದಿರಂದ ವಾಹನ ದಟ್ಟಣೆ ಹೆಚ್ಚಿರುತ್ತದೆ. ಮಳೆಗಾಲ ಆರಂಭವಾಗಿ ತಿಂಗಳಾದರೂ ಇಲಾಖೆಯಿಂದ ಸಮರ್ಪಕ ನಿರ್ವಹಣೆಯಿಲ್ಲದೆ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತದೆ. ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಬೃಹತ್ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಬಂದಾಗ ಕೆಸರು ಮಣ್ಣಿನಿಂದ ಕೂಡಿದ ಭಾರಿ ಗಾತ್ರದ ಹೊಂಡಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಆಗ ಗುಂಡಿಗಳ ಆಳ ತಿಳಿಯದೆ ಸವಾರರು ಗುಂಡಿಗಳಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಕೆಲವು ದ್ವ್ವಿಚಕ್ರ ಹಾಗೂ ರಿಕ್ಷಾಗಳು ಹೊಂಡಕ್ಕೆ ಬಿದ್ದು ಅವಘಡಗಳು ಸಂಭವಿಸಿವೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸಪಡುತ್ತಾರೆ. ಅಪಘಾತಕ್ಕೆ ಆಹ್ವಾನ: ಶನಿವಾರ ಅಲ್ಬಾಡಿ ಮರೂರು ಕ್ರಾಸ್ ಬಳಿ ದ್ವಿಚಕ್ರದಲ್ಲಿ ಸಾಗುತ್ತಿದ್ದ ಹಿಂಬದಿ ಸವಾರೆ ಮಹಿಳೆ ಹಾಗೂ ಪುಟ್ಟ ಮಗು ನೀರು ತುಂಬಿದ ಹೊಂಡದಲ್ಲಿ ಬಿದ್ದು ಇಬ್ಬರಿಗೂ ಗಾಯವಾಗಿ ಬೆಳ್ವೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿನ ರಸ್ತೆ ಅವ್ಯವಸ್ಥೆಯ ಅಧಿಕಾರಿಗಳ ನಿರ್ಲಕ್ಷೃಕ್ಕೆ ಈ ಭಾಗದ ನಾಗರಿಕರು ಹಾಗೂ ವಾಹನ ಸವಾರರು ನಿತ್ಯ ಹಿಡಿಶಾಪ ಹಾಕುವಂತಾಗಿದೆ. ರಾಜ್ಯ ಹೆದ್ದಾರಿ ಬಹಳಷ್ಟು ಹದಗೆಟ್ಟಿದ್ದರೂ ದುರಸ್ತಿಗೆ ಯಾವುದೇ ಕ್ರಮಕೈಗೊಳ್ಳದಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಇಲ್ಲಿನ ಸ್ಥಳೀಯರು, ವಾಹನ ಚಾಲಕ ಮಾಲೀಕರು ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ ಮರೂರು ಕ್ರಾಸ್ ಸಂಪರ್ಕ ಮಾರ್ಗವು ಬಹಳಷ್ಟು ಅಪಾಯಕಾರಿಯಾಗಿದೆ. ರಾಜ್ಯ ಹೆದ್ದಾರಿಯಿಂದ ಮರೂರು ಕ್ರಾಸ್ ಮೂಲಕ ವಾಹನಗಳನ್ನು ಚಲಾಯಿಸುವಾಗ ಈಗಾಗಲೇ ಹಲವಾರು ಅಪಘಾತಗಳು, ದ್ವಿಚಕ್ರ ವಾಹನಗಳ ಅವಘಡಗಳು ಸಂಭವಿಸಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳ ಕಾರಣದಿಂದ ಈಗಾಗಲೇ ಹಲವಾರು ಮಂದಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಅಪಾಯಕಾರಿ ತಿರುವು ಇರುವುದರಿಂದ ವಾಹನ ಸವಾರರು ತೀರಾ ಎಚ್ಚರಿಕೆಯಿಂದ ಸಂಚರಿಸಬೇಕಿದೆ.
ಅಲ್ಬಾಡಿ ಮೂಲಕ ಪ್ರಮುಖ ಸ್ಥಳಗಳಿಗೆ ಸಾಗುವ ಮಾರ್ಗದಲ್ಲಿ ಪ್ರತಿ ನಿತ್ಯ ವಾಹನಗಳ ಸಂಚಾರ ಹೆಚ್ಚಿದೆ. ಅಲ್ಬಾಡಿ - ಮರೂರು ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷೃದಿಂದ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಈ ಮಾರ್ಗದ ವಾಹನ ಸವಾರರು ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಅನಾಹುತಗಳು ಸಂಭವಿಸಿವೆ. ಕೂಡಲೇ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. -ಸುದೀಪ್ ಶೆಟ್ಟಿ ಅಲ್ಬಾಡಿ, ಪ್ರಯಾಣಿಕ ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ ಮರೂರು ಕ್ರಾಸ್ ಬಳಿ ಮಾರ್ಗದಲ್ಲಿ ಬೃಹತ್ ಗಾತ್ರದ ಹೊಂಡಗುಂಡಿಗಳಿಂದ ಕೂಡಿ ವಾಹನ ಚಾಲಕರು, ಜನರಿಗೆ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇಲ್ಲಿನ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ರಾಮಣ್ಣ ಗೌಡ ಎಂ., ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ.