ಜಿಲ್ಲೆ

ಕಳೆದುಹೋಗಿದ್ದ ಬ್ಯಾಗ್ ಪತ್ತೆ ಹಚ್ಚಿ ಮಾಲೀಕರಿಗೆ ತಲುಪಿಸಿದ ಪೊಲೀಸರು

ಮೈಸೂರು: ಆಟೋದಲ್ಲಿ ಮರೆತಹೋಗಿದ್ದ 40 ಗ್ರಾಂ ತೂಕದ ಚಿನ್ನ ಹಾಗೂ 30 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳಿದ್ದ ಬ್ಯಾಗ್‌ನ್ನು ಲಷ್ಕರ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಮಾಲೀಕರಿಗೆ ಸೇರಿಸಿದ್ದಾರೆ.

ಬೆಂಗಳೂರಿನ ನಿವಾಸಿ ಇದಾಯತ್ ಉಲ್ಲಾ ಶನಿವಾರ ಉದಯಗಿರಿಯ ಫಂಕ್ಷನ್ ಹಾಲ್‌ಒಂದರಲ್ಲಿ ಮದುವೆ ಮುಗಿಸಿ ಆಟೋದಲ್ಲಿ ಲಗ್ಗೇಜ್ ಸಮೇತ ಹಿಂದಿರುಗುತ್ತಿದ್ದರು. ಬಸ್ ನಿಲ್ದಾಣದ ಬಳಿ ಬಸ್ ಹಿಡಿಯುವ ಆತುರದಲ್ಲಿ ಚಿನ್ನಬೆಳ್ಳಿ ಪದಾರ್ಥಗಳಿರುವ ಬ್ಯಾಗ್‌ನ್ನು ಆಟೋದಲ್ಲೇ ಮರೆತು ಹೋಗಿದ್ದರು.

ಬಳಿಕ ನೆನಪಾಗಿ ಕೂಡಲೇ ಲಷ್ಕರ್ ಠಾಣೆ ನಿರೀಕ್ಷಕ ಪ್ರಸಾದ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆಟೋ ಪತ್ತೆ ಹಚ್ಚಿ ಮರೆತುಹೋಗಿದ್ದ ಚಿನ್ನ ಬೆಳ್ಳಿ ಪದಾರ್ಥಗಳಿರುವ ಬ್ಯಾಗ್ ವಶಪಡಿಸಿಕೊಂಡು ಮಾಲೀಕರಿಗೆ ತಲುಪಿಸಿದ್ದಾರೆ.