RAICHUR 
ಜಿಲ್ಲೆ

ಬಯಲಾಟ ಕವಿ ವಾಬಯ್ಯ ಶೆಟ್ಟರು ಅಜರಾಮರ - ಶಾಶ್ವತಸ್ವಾಮಿ

 ರಾಯಚೂರು ವಾಬಯ್ಯ ಶೆಟ್ಟಿಯವರು ಕೇವಲ ಮೂರನೇ ತರಗತಿವರೆಗೆ ಓದಿದರೂ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿ ಸಂಪಾದಿಸಿಕೊಂಡ ಜ್ಞಾನದಿಂದ ಹಳಗನ್ನಡವನ್ನು ನಿರರ್ಗಳವಾಗಿ ಬಳಿಸಿರುವದು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣುತ್ತದೆಂದು ಹಿರಿಯ ಸಾಹಿತಿ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು ರಚಿಸಿದ ನನ್ನಪ್ಪ ನನ್ನೂರ ದೈವ ಮತ್ತು ಆನೆಗೆ ಅಂಗಿ ತೊಡಿಸಿದ ಅಮ್ಮು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ವಾಬಯ್ಯ ಶೆಟ್ಟಿಯವರ ಅಗಾಧವಾದ ಪಾಂಡಿತ್ಯ ಅವರ ಕೃತಿಗಳಲ್ಲಿ ಅನಾವರಣಗೊಂಡಿದ್ದು, ಅಂತಹ ಮಹಾನ್ ವ್ಯಕ್ತಿಯ ಬದುಕು ಬರಹದ ಕುರಿತಾಗಿ ಅವರ ಸುಪುತ್ರ ತಿಮ್ಮಯ್ಯ ಶೆಟ್ಟಿ ಇಲ್ಲೂರು ಅವರು ನನ್ನಪ್ಪ ನನ್ನೂರ ದೈವ ಎಂಬ ಸಂಶೋಧನ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿರುವ ತಿಮ್ಮಯ್ಯ ಶೆಟ್ಟಿ ಅಭಿನಂದನಾರ್ಹರು ಎಂದರು.

ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ, ಒಬ್ಬ ಅಸಾಧಾರಣ ವ್ಯಕ್ತಿಯ ಕಲಾ ಪ್ರತಿಭೆ ಮತ್ತು ಸಾಹಿತ್ಯದ ಗಟ್ಟಿತನ ಮೆಚ್ಚುವಂತದ್ದಾಗಿದೆ. ಅಂತಹ ಕಲಾ ಪೋಷಕನ ಬದುಕು ಬರಹದ ಕುರಿತು ಅವರ ಸುಪುತ್ರರಾದ ತಿಮ್ಮಯ್ಯ ಶೆಟ್ಟಿಯವರು ರಚಿಸಿದ ನನ್ನಪ್ಪ ನನ್ನೂರ ದೈವ ಕೃತಿಯು ಸಂಶೋಧನಾ ಕೃತಿಯಾಗಿದ್ದು ವಾಬಯ್ಯ ಶೆಟ್ಟಿಯವರ ಜೀವನ, ಬರಹಗಳು ಮತ್ತು ಕ್ಷೇತ್ರಾಧ್ಯಯನದ ಮೂಲಕ ತಮ್ಮ ತಂದೆಯವರ ಕುರಿತಾಗಿ ರಚಿಸಿದ ಕೃತಿಯಾಗಿದೆ ಎಂದು ಹೇಳಿದರು.

ಶಂಕರದೇವರು ಹಿರೇಮಠ. ಕೃತಿಕಾರರಾದ ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಾತನಾಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಗನಗೌಡ ಮಾಲಿಪಾಟೀಲ ಮದರಕಲ್,ಕೋಶಾಧ್ಯಕ್ಷ ಡಾ. ವಿಜಯ ರಾಜೇಂದ್ರ, ರಾವುತ್ ರಾವ ಬರೂರ್ ಸೇರಿ ಅನೇಕರು ಇದ್ದರು.