ಸಿದ್ದಾಪುರ: ಜನಹಿತ ಸೇವಾ ಫೌಂಡೇಷನ್ ಮತ್ತು ಶ್ರೀಧರ ಭಕ್ತರ ಸಹಯೋಗದಲ್ಲಿ ಹೊನ್ನಾವರ ತಾಲೂಕಿನ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮೇಲಿನ ಮಣ್ಣಿಗೆ ಅವರಿಂದ ಸಿದ್ದಾಪುರದ ಸಿದ್ಧಿವಿನಾಯಕ ಪ್ರೌಢಶಾಲೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ವರದಯೋಗಿ ಶ್ರೀಧರ ನಾಟಕ ಮೇ 18ರಂದು ರಾತ್ರಿ 8.30ರಿಂದ ನಡೆಯಲಿದೆ ಎಂದು ಜನಹಿತ ಸೇವಾ ಪೌಂಡೇಷನ್ ಪ್ರಮುಖ ಲೋಕೇಶ ಹೆಗಡೆ ಹದಿನಾರನೇಮೈಲಕಲ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಅವರಿಂದ ಈಗಾಗಲೇ ನಾಡಿನ ಹಲವೆಡೆ ವರದಯೋಗಿ ಶ್ರೀಧರ ನಾಟಕ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿದೆ. ಈ ನಾಟಕ ತಂಡದಲ್ಲಿ 45ಕ್ಕೂ ಹೆಚ್ಚು ಕಲಾವಿದರಿದ್ದಾರೆ. ರಂಗತಪಸ್ವಿ ಜಿ.ಡಿ. ಭಟ್ಟ ಕೆಕ್ಕಾರ ಅವರ ನಿರ್ದೇಶನ ಇದ್ದು, ಸಂತೋಷ ಯಾಜಿ ಮಣ್ಣಿಗೆ ಸಂಯೋಜನೆ ಹಾಗೂ ಎಂ.ಜಿ. ವಿಷ್ಣು ಮಣ್ಣಿಗೆ ರಂಗರೂಪ ನೀಡಿದ್ದಾರೆ. ವಿಶ್ವೇಶ್ವರ ಭಟ್ಟ ಖರ್ವಾ ಹಾಗೂ ಸಂಗಡಿಗರು ಸಂಗೀತ ನೀಡಿದ್ದಾರೆ.
ವಿಶೇಷವಾಗಿ ಈ ನಾಟಕದ ಮೂಲಕ ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆ ಹಾಗೂ ಅವರ ಆದರ್ಶ ತಿಳಿಸುವ ಉದ್ದೇಶ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ನಾಟಕದಲ್ಲಿ ಸಂಗ್ರಹವಾಗಿ ಉಳಿದ ಹಣವನ್ನು ಈ ವರ್ಷದ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪೋ›ತ್ಸಾಹಿಸಿ ಅಭಿನಂದಿಸಲಾಗುತ್ತದೆ ಎಂದು ಹೇಳಿದರು.
ನಿವೃತ್ತ ಮುಖ್ಯಾಧ್ಯಾಪಕ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಶ್ರೀಧರ ಸ್ವಾಮಿಗಳು ಆಧ್ಯಾತ್ಮಿಕ, ಧಾರ್ವಿುಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಅವರ ಜೀವನದ ಮೌಲ್ಯ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಶ್ರೀಧರ ಸ್ವಾಮಿಗಳು ನಡೆದಾಡುವ ದೇವರೆಂದೇ ಹೆಸರಾದವರು. ಅಂತ ಮಹಾತ್ಮರ ವಿಚಾರ ಧಾರೆ, ಸಂದೇಶಗಳನ್ನು ಈ ನಾಟಕ ಒಳಗೊಂಡಿದೆ ಎಂದು ಹೇಳಿದರು.