ನರೇಗಲ್ಲ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣಾ ಕಾಯ್ದೆಯ (ಇಪಿಎ) ಅಡಿ 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧಿಸಲು ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ, ಅದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಂತಿಲ್ಲ.
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಮೇಲೆ ಕಾಯ್ದೆ ಯಾವುದೇ ಪ್ರಭಾವ ಬೀರಿದಂತೆ ಕಾಣುತ್ತಿಲ್ಲ. ಹೀಗಾಗಿ, ಪಟ್ಟಣ ಸೇರಿ ಹೋಬಳಿಯಾದ್ಯಂತ ನಿಷೇಧಿತ ಪ್ಲಾಸ್ಟಿಕ್ ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಪ್ಲಾಸ್ಟಿಕ್ ನಿಷೇಧ ಕಾಯ್ದೆ ಉಲ್ಲಂಘಿಸಿದಲ್ಲಿ ಕಾಯ್ದೆಯ ಸೆಕ್ಷನ್ 15ರಡಿ 1 ಲಕ್ಷ ರೂ. ದಂಡ ಅಥವಾ 5 ವರ್ಷಗಳ ಕಾಲ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಹಣ್ಣು, ತರಕಾರಿ, ಹೂವು, ಕಿರಾಣಿ ವ್ಯಾಪಾರಿಗಳು, ಮಾಂಸದ ಅಂಗಡಿಕಾರರು ಸೇರಿ ಬಹುತೇಕ ಕಡೆ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆ ನಿರಾತಂಕವಾಗಿ ನಡೆದಿದೆ. ಸಾರ್ವಜನಿಕರು ಕೂಡ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಏಕಬಳಕೆಯ ಪ್ಲಾಸ್ಟಿಕ್‌ಗಳು ಅಂದರೆ ಒಂದೇ ಬಾರಿ ಬಳಕೆಗಾಗಿ ತಯಾರಿಸಿದ ಕ್ಯಾರಿ ಬ್ಯಾಗ್‌ಗಳು. ಇವುಗಳಲ್ಲಿ ಹೆಚ್ಚಾಗಿ ಪಾಲಿಥಿನ್ ಬ್ಯಾಗ್‌ಗಳು, ಸ್ಯಾಚೆಟ್‌ಗಳು, ಶಾಂಪೂ ಬಾಟಲಿಗಳು, ಗ್ಲಾಸ್‌ಗಳು, ಇಯರ್ ಬಡ್ಸ್ ಕಡ್ಡಿ ಇತ್ಯಾದಿಗಳು. ಅವುಗಳನ್ನು ಬಳಸಿದ ಕೂಡಲೇ ವಿಲೇವಾರಿ ಮಾಡಲಾಗುತ್ತದೆ, ಮರುಬಳಕೆ ಮಾಡುವುದಿಲ್ಲ. ಇವುಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತದೆ.
ಇಯರ್ ಬಡ್ಸ್, ಬಲೂನ್‌ಗಳಿಗೆ ಅಂಟಿಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಬಾವುಟ, ಕ್ಯಾಂಡಿ ಸ್ಟಿಕ್ಸ್, ಐಸ್‌ಕ್ರೀಂ ಕಡ್ಡಿಗಳು, ಪಾಲಿಸ್ಟೈರೇನ್ (ಥರ್ಮೊಕೋಲ್), ಪ್ಲಾಸ್ಟಿಕ್ ತಟ್ಟೆ, ಲೋಟಗಳು, ಪ್ಲಾಸ್ಟಿಕ್ ರೂಪದ ಗಾಜುಗಳು, ಫೋರ್ಕ್, ಚಮಚ, ಸ್ಪ್ರಾಗಳು, ಟ್ರೇಗಳು, ಚಾಕುಗಳು, ಸಿಹಿತಿನಿಸುಗಳ ಡಬ್ಬಿಗಳಲ್ಲಿ ಬಳಸುವ ಪ್ಯಾಕೇಜಿಂಗ್ ಫಿಲಂಗಳು, ಆಹ್ವಾನ ಪತ್ರಿಕೆಗಳು, ಸಿಗರೇಟು ಪ್ಯಾಕೇಟ್‌ಗಳು, 100 ಮೈಕ್ರಾನ್‌ಗಿಂತ ಕಮ್ಮಿ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು ಮತ್ತು ಸ್ಟಿಕ್ಕರ್‌ಗಳು.
ಸರ್ಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಅದರ ಉಲ್ಲಂಘನೆಗೆ ಶಿಕ್ಷೆಯ ಪ್ರಮಾಣವನ್ನು ಕೂಡ ಪ್ರಕಟಿಸಿದೆ. ಆದರೆ, ಪ್ಲಾಸ್ಟಿಕ್ ಉತ್ಪಾದನೆಯನ್ನು ಸಂಪೂರ್ಣ ಬಂದ್ ಮಾಡುವಲ್ಲಿ ವಿಫಲವಾಗಿದೆ. ಮಾರುಕಟ್ಟೆಗೆ ಪ್ಲಾಸ್ಟಿಕ್ ಬರದಂತೆ ತಡೆಯುವ ಕಾರ್ಯವಾಗುತ್ತಿಲ್ಲ. ಪ್ಲಾಸ್ಟಿಕ್ ಉತ್ಪಾದನೆಯನ್ನು ತಡೆಯುವುದನ್ನು ಬಿಟ್ಟು, ಮಾರುಕಟ್ಟೆಗೆ ಬಂದು ದಾಳಿ ಮಾಡುವುದು ಎಷ್ಟು ಸರಿ? ಪ್ಲಾಸ್ಟಿಕ್ ವಸ್ತುಗಳು ಮಾರುಕಟ್ಟೆಗೆ ಬರದಂತೆ ತಡೆಯುವ ಕಾರ್ಯವಾಗಬೇಕು. ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದಲ್ಲಿ ಮಾತ್ರ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿ ಸಾಧ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ನಿಷೇಧ ಕಾಯ್ದೆಯ ಮಹತ್ವವನ್ನು ಸರಿಯಾಗಿ ಮನವರಿಕೆ ಮಾಡಬೇಕು. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಹಂತದಲ್ಲಿಯೇ ಬಂದ್ ಮಾಡುವಂತಾಗಬೇಕು. ಅಂದಾಗ ಮಾತ್ರ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲು ಸಾಧ್ಯ.i ಡಾ. ಗಜಾನನ ಕಾಳೆಹಿರಿಯ ವೈದ್ಯ ನರೇಗಲ್ಲ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಸಾಕಷ್ಟು ತಿಳಿವಳಿಕೆ ನೀಡಲಾಗಿದೆ. ಅನೇಕ ಬಾರಿ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ.i ರಾಮಚಂದ್ರ ಕಜ್ಜಿಆರೋಗ್ಯ ನಿರೀಕ್ಷಕರು ಪಪಂ ನರೇಗಲ್ಲ