ಜಿಲ್ಲೆ

ಯೋಜನಾ ಪ್ರಾಧಿಕಾರಕ್ಕೆ ಅಧಿಕಾರಿಗಳಿಲ್ಲ : ಕಡಬ ತಾಪಂಯಲ್ಲಿ 9/11 ನಕ್ಷೆ ಅನುಮೋದನೆಗೆ ಸಂಕಷ್ಟ : ಕಾಯಂ ನೇಮಕಾತಿಗೆ ಆಗ್ರಹ

ಸೌಮ್ಯ ಆರ್

ಕಡಬ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಗುತ್ತಿದ್ದ 9/11 ಭೂಮಿಯ ವಿನ್ಯಾಸನಕ್ಷೆ ಅನುಮೋದನೆ ಪ್ರಸ್ತುತ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಗುತ್ತಿದೆ. ಆದರೆ ಕಡಬ ತಾಲೂಕು ಪಂಚಾಯಿತಿಯಲ್ಲಿ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಿ ಸಮರ್ಪಕ ಸೇವೆ ನೀಡದೆ ಸಾರ್ವಜನಿಕರು ಪರದಾಡುವಂತಾಗಿದೆ.

ಭೂ ಪರಿವರ್ತಿತ 9/11 ವಿನ್ಯಾಸ ನಕ್ಷೆ ಅನುಮೋದನೆಯ ಅಧಿಕಾರ ಈ ಹಿಂದೆ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇತ್ತು. ಆದರೆ ಅದನ್ನು ತಡೆದು ಯೋಜನಾ ಪ್ರಾಧಿಕಾರಕ್ಕೆ ನೀಡಿದ ಬಳಿಕ ಈ ಸಮಸ್ಯೆ ಕಾಡಲಾರಂಭಿಸಿದೆ. ಇದಕ್ಕಾಗಿ ಕಡಬ ತಾಲೂಕು ಪಂಚಾಯಿತಿ ಕಚೇರಿಯಲ್ಲಿ 6 ತಿಂಗಳ ಹಿಂದೆ ಕಚೇರಿ ಆರಂಭವಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮನೆ, ಕಟ್ಟಡ ನಿರ್ಮಾಣ, ಬ್ಯಾಂಕ್ ಸಾಲ ಪಡೆಯುವ ಉದ್ದೇಶದಿಂದ ಭೂಪರಿವರ್ತನೆ ವಿನ್ಯಾಸ ನಕ್ಷೆಗಾಗಿ ಈಗ ತಿಂಗಳುಗಟ್ಟಲೆ ಅಲೆಯುಂತಾಗಿದೆ. ಕಡಬ ತಾಲೂಕು ವ್ಯಾಪ್ತಿಯ 285ಕ್ಕೂ ಹೆಚ್ಚು ಜನರ ಕಡತಗಳು ಕಚೇರಿ ಒಳಗಡೆ ಧೂಳು ತಿನ್ನುತ್ತಿವೆ ಎಂಬ ದೂರು ವ್ಯಕ್ತವಾಗಿದೆ. 2024 ಸೆಪ್ಟೆಂಬರ್ 27ರಂದು ಕಡಬದಲ್ಲಿ ಆರಂಭವಾದ ಕಚೇರಿಗೆ ಪುತ್ತೂರು ಪುಡಾ ಕಚೇರಿಯಿಂದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೊಬ್ಬರನ್ನು ನಿಯೋಜನೆ ಮಾಡಲಾಗಿತ್ತು. ವಾರದಲ್ಲಿ ಎರಡು ದಿನ ಭೇಟಿ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಡಬ, ಸುಳ್ಯ, ಬಂಟ್ವಾಳ ಹಾಗೂ ಪುತ್ತೂರಿನ ಜವಾಬ್ದಾರಿ ಇತ್ತು. ನಾಲ್ಕು ತಾಲೂಕುಗಳಲ್ಲಿ ವಾರಕ್ಕೆ ಎರಡು ದಿನ ಒಂದು ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಮೂರು ತಿಂಗಳು ಇಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿಗೊಂಡು ಶಿವಮೊಗ್ಗಕ್ಕೆ ವರ್ಗಾವಣೆಗೊಂಡರು.

ಆ ಬಳಿಕ ಕಡಬಕ್ಕೆ ಮಂಗಳೂರಿನಿಂದ ಒಬ್ಬರು ಸದಸ್ಯ ಕಾರ್ಯದರ್ಶಿಯನ್ನು ನಿಯೋಜನೆಗೊಳಿಸಲಾಗಿತ್ತು. ಅವರು ಇಲ್ಲಿಗೆ ವಾರಕ್ಕೊಮ್ಮೆ ಬರುವುದು ಅಪರೂಪವಾಗತೊಡಗಿತು. ಒಂದು ತಿಂಗಳು ಕಾರ್ಯನಿರ್ವಹಿಸಿ ಬರುವುದನ್ನೇ ನಿಲ್ಲಿಸಿದರು. ಆ ಬಳಿಕ ಈ ಜಾಗಕ್ಕೆ ಯಾರನ್ನೂ ನಿಯೋಜಿಸಿಲ್ಲ. ಗ್ರಾಮ ಪಂಚಾಯಿತಿಯಿಂದ ಏಕವಿನ್ಯಾಸ ನಕ್ಷೆ ಅನುಮೋದನೆ ಕಡಬದ ಪ್ರಾಧಿಕಾರ ಕಚೇರಿಗೆ ಬಂದರೆ ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪಂಚಾಯಿತಿಯವರು ನೀಡಿದ ನಕ್ಷೆ ಸರಿ ಇದೆಯೇ ಎಂದು ದೃಢೀಕರಿಸಬೇಕು. ಅವರ ವರದಿಯ ಮೇಲೆ ಅಧಿಕಾರಿ ಅನುಮೋದನೆ ನೀಡುತ್ತಾರೆ. ವರದಿ ಸರಿ ಇಲ್ಲದಿದ್ದರೆ ಅದಕ್ಕೆ ಹಿಂಬರಹ ನೀಡಬೇಕು. ಇಷ್ಟು ಪ್ರಕ್ರಿಯೆಗೆ ಏನಿಲ್ಲವೆಂದರೂ ಎರಡು ತಿಂಗಳು ತೆಗೆದುಕೊಳ್ಳಲಾಗುತ್ತದೆ. ಕೆಲವರು ಅರ್ಜಿ ಹಾಕಿ ನಾಲ್ಕು ತಿಂಗಳಾದರೂ ಅವರಿಗೆ ಅನುಮೋದನೆ ದೊರೆಯದೆ ಸಂಕಷ್ಟದಲ್ಲಿದ್ದಾರೆ.

ಹೈಕೋರ್ಟ್ ಆದೇಶದನ್ವಯ ಅಧಿಕಾರ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ಯನ್ನು ಉಲ್ಲಂಘಿಸಿ ಗ್ರಾಮ ಪಂಚಾಯಿತಿಗಳಿಂದ/ನಗರ ಸ್ಥಳೀಯ ಸಂಸ್ಥೆಗಳಿಂದ ವಿನ್ಯಾಸ ನಕ್ಷೆ ಅನುಮೋದಿಸುತ್ತಿರುವುದನ್ನು ತಡೆಗಟ್ಟುವಂತೆ ವ್ಯಕ್ತಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ನೀಡಿದ ಸೂಚನೆಯಂತೆ ಸರ್ಕಾರ ಈ ಕ್ರಮ ಕೈಗೊಂಡಿರುವುದರಿಂದ ಜನ ಸಂಕಷ್ಟ ಎದುರಿಸುವುದಲ್ಲದೆ ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಡಬದಲ್ಲಿ ಯೋಜನಾ ಪ್ರಾಧಿಕಾರದಿಂದ ಏಕವಿನ್ಯಾಸ ನಕ್ಷೆ ನೀಡಲು ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಡಬದ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿ ಕಡಬಕ್ಕೆ ಒಬ್ಬ ಕಾಯಂ ಅಧಿಕಾರಿಯನ್ನು ನೇಮಿಸುವಂತೆ ಕೋರಲಾಗಿದೆ. ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪಿ.ಪಿ.ವರ್ಗೀಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಡಬ ಜನತೆಯ ಸಮಸ್ಯೆ ಬಗ್ಗೆ ದೂರು ಬಂದಿದೆ. ಅಲ್ಲಿಗೆ ಪುತ್ತೂರು ಪುಡಾದಿಂದ ಕಡಬಕ್ಕೆ ಸದಸ್ಯ ಕಾರ‌್ಯದರ್ಶಿಯಾಗಿ ಗುರುಪ್ರಸಾದ್ ಎಂಬುವರನ್ನು ನಿಯೋಜನೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಅವರು ಕಡಬಕ್ಕೆ ಬರಲಿದ್ದಾರೆ. ನವೀನ್ ಭಂಡಾರಿ, ಕಡಬ ತಾಪಂ ಕಾರ್ಯನಿರ್ವಹಣಾಧಿಕಾರಿ ಮನೆ ಕಟ್ಟುವ ಸಲುವಾಗಿ 3 ತಿಂಗಳ ಹಿಂದೆ 9/11ಗೆ ಅರ್ಜಿ ಹಾಕಿದ್ದೇನೆ. ಕಡತ ಕಡಬ ತಾಲೂಕು ಪಂಚಾಯಿತಿ ಕಚೇರಿಯಲ್ಲಿದೆ. ಅನುಮೋದನೆ ಮಾಡುವ ಅಧಿಕಾರಿ ಕಡಬಕ್ಕೆ ಬರುವ ನಿಗದಿತ ದಿನದಂದು ತೆರಳಿದರೆ ಅಂದು ಅಧಿಕಾರಿ ಬರುವುದಿಲ್ಲ. ಮನೆ ಕಟ್ಟಲು ಬ್ಯಾಂಕ್ ಲೋನ್ ಮಾಡಲು 9/11 ಅಗತ್ಯ. ಹೀಗಾಗಿ ಹಲವು ಬಾರಿ ಕಡಬ ಕಚೇರಿಗೆ ಅಲೆದಾಟ ಮಾಡುವಂತಾಗಿದೆ. ಜಯರಾಜ್ ಬರೆಂಬೊಟ್ಟು, 9/11ಗೆ ಅರ್ಜಿ ಹಾಕಿದವರು https://www.vijayavani.net/gang-war https://www.vijayavani.net/three-awarded-honorary-doctorates-by-mangalore-university