ಜಿಲ್ಲೆ

ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವಾರದ 6 ದಿನವೂ ಮೊಟ್ಟೆ ವಿತರಣೆ..!

ಬೆಂಗಳೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಉದ್ದೇಶದಿಂದ ಮದ್ಯಾಹ್ನದ ಉಪಾಹಾರ ಯೋಜನೆಯಡಿ ವಾರಕ್ಕೆ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆ ವಿತರಣೆಯನ್ನು ಇನ್ನುಮುಂದೆ ವಾರದ 6 ದಿನವೂ ವಿತರಿಸುವ ಯೋಜನೆಗೆ ಶನಿವಾರ ಚಾಲನೆ ದೊರೆತಿದೆ.

ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿಯವರ ಫೌಂಡೇಶನ್ ಸಹಯೋಗದಲ್ಲಿ ಆರಂಭಿಸಲಾಗಿರುವ ಮಹತ್ವಾಕಾಂಕ್ಷಿ ಯೋಜನೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೌಷ್ಟಿಕ ಆಹಾರವೂ ಮುಖ್ಯವಾಗಿದ್ದು, ಆ ಕಾರಣಕ್ಕೆ ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿತ್ತು. ಅಜೀಂ ಪ್ರೇಮ್‌ಜಿ ಅವರು ತಮ್ಮ ಪ್ರತಿಷ್ಠಾನದಿಂದ ಇನ್ನುಳಿದ ನಾಲ್ಕು ದಿನವೂ ಮೊಟ್ಟೆ ವಿತರಿಸುವ ಯೋಜನೆಗೆ ಸರ್ಕಾರದೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 55 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದೆ ಎಂದರು.

ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಇರುತ್ತದೆ. ಇದರಿಂದ ಅವರ ಶೈಕ್ಷಣಿಕ ಸಾಧನೆಗೆ ಅಡಚಣೆಯಾಗುವ ಸಾಧ್ಯತೆ ಇರುತ್ತದೆ. ಬಡಮಕ್ಕಳು ಮೇಲ್ವರ್ಗದ ಮಕ್ಕಳಂತೆ ಉತ್ತಮ ಸಾಧನೆ ಮಾಡಬೇಕೆಂಬ ಕಾರಣಕ್ಕೆ ಸರ್ಕಾರ ಈ ಯೋಜನೆ ಆರಂಭಿಸಿದೆ. ಜಾತಿಭೇದ, ಲಿಂಗಬೇಧ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯಗಳು ನಿವಾರಣೆಯಾಗಿ ಸಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸಮಾನ ಅವಕಾಶಗಳು ದೊರೆಯಬೇಕು. ಇದಕ್ಕಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಊಟ, ಶಿಕ್ಷಣ, ಬಟ್ಟೆ, ಶೂ, ಪುಸ್ತಕ ಎಲ್ಲವನ್ನು ನೀಡುತ್ತಿದೆ ಇವುಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ, ವೈಚಾರಿಕವಾಗಿ ವಿಕಾಸ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಯಾಸ್ಮಿನ್ ಪ್ರೇಮ್‌ಜಿ, ಶಾಸಕ ರಿಜ್ವಾನ್ ಅರ್ಷದ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್, ಆಯುಕ್ತರಾದ ಕಾವೇರಿ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವಲಪ್‌ಮೆಂಟ್ ಸಿಇಓ ಅನುರಾಗ್ ಮತ್ತಿತರರು ಪಾಲ್ಗೊಂಡಿದ್ದರು.

1500 ಕೋಟಿ ದೇಣಿಗೆಯ ಒಪ್ಪಂದ

ರಾಜ್ಯದ ಆಯವ್ಯಯದಲ್ಲಿ 229.22 ಕೋಟಿಗಳನ್ನು ಮೀಸಲಿಟ್ಟು ವಾರಕ್ಕೆ 2 ದಿನ ಮೊಟ್ಟೆ ಅಥವಾ ಪರ್ಯಾಯ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ಅಜೀಂ ಪ್ರೇಮ್‌ಜಿ ಫೌಂಡೇಶನ್ 2024-25ನೇ ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷಗಳವರೆಗೆ ವಾರದ ಉಳಿದ ನಾಲ್ಕು ದಿನಗಳು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (ಎಸ್‌ಡಿಎಂಸಿ) ಮೂಲಕ ಮೊಟ್ಟೆಗಳನ್ನು ಖರೀದಿಸಿ ವಿತರಿಸುವ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ 1500 ಕೊಟಿ ರೂಪಾಯಿ ದೇಣಿಗೆ ನೀಡಲು ಮುಂದಾಗಿದೆ.

ಸರ್ಕಾರಿ ಮತ್ತು ಅನುದಾನಿತ 50 ಸಾವಿರಕ್ಕೂ ಹೆಚ್ಚು ಶಾಲೆಗಳ 1 ರಿಂದ 10 ನೇ ತರಗತಿಯ ಸುಮಾರು 55 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಯೋಜನೆಯ ಲಾನುಭವಿಗಳಾಗಿದ್ದು, ಮೊಟ್ಟೆ ಸೇವಿಸದವರಿಗೆ ಪರ್ಯಾಯವಾಗಿ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ಪೂರಕ ಪೌಷ್ಟಿಕ ಆಹಾರವಾಗಿ ವಿತರಿಸಲಾಗುತ್ತದೆ.

ಸರ್ವರಿಗೂ ಸಮಾನ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಶಿಕ್ಷಣದ ಭಾಗವಾಗಿ ಪೌಷ್ಟಿಕ ಆಹಾರ ನೀಡುವ ಯೋಜನೆ ಸರ್ಕಾರ ಆರಂಭಿಸಿತ್ತು. ಈ ಯೋಜನೆಯನ್ನು ವಿಸ್ತರಿಸಲು ಅಜೀಂ ಪ್ರೇಮ್‌ಜಿ ಮುಂದೆ ಬಂದಿರುವುದು ಸರ್ಕಾರದ ಯೋಜನೆಗೆ ಬಲ ಬಂದಿದೆ.

-ಮಧು ಬಂಗಾರಪ್ಪ, ಶಿಕ್ಷಣ ಸಚಿವ

ಕಳೆದ 20 ವರ್ಷಗಳಿಂದ ನಮ್ಮ ಫೌಂಡೇಶನ್ ಇಂತಹ ಸೇವೆಯನ್ನು ಮಾಡುತ್ತಾ ಬಂದಿದೆ. ನಮ್ಮ ರಾಜ್ಯಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬುದು ನಮ್ಮ ಉದ್ದೇಶ. ಇದು ನಮ್ಮ ಕರ್ತವ್ಯ ಕೂಡಾ. ಸರ್ಕಾರದೊಂದಿಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ಇದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿ. ಆ ಮೂಲಕ ಅವರು ಹೆಚ್ಚಿನ ಸಾಧನೆ ಮಾಡಲಿ.

-ಅಜೀಂ ಪ್ರೇಮ್‌ಜಿ, ವಿಪ್ರೋ ಸಂಸ್ಥೆ ಮುಖ್ಯಸ್ಥ.