ಜಿಲ್ಲೆ

ಶಂಕರರು ತಪಸ್ಸು ಮಾಡಿದ ಜಾಗ ಭಾರತಕ್ಕೆ ಸೇರಲಿ

ಶಿರಸಿ: ಶಂಕರಾಚಾರ್ಯರು ತಪಸ್ಸು ಮಾಡಿದ ನೆಲ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಅಲ್ಲಿನ ಜನರಿಗೆ ಶಂಕರರು ಪ್ರಾತಃಸ್ಮರಣೀಯರು. ಅಂತಹ ಕಾಶ್ಮೀರದಲ್ಲಿ ಇಂದು ಯುದ್ಧದ ಸನ್ನಿವೇಶ ನಿರ್ವಣವಾಗಿದೆ. ಅವರು ತಪಸ್ಸನ್ನಾಚರಿಸಿದ ನೆಲ ನಮಗೆ ಸೇರುವಂತಾವಲಿ ಎಂದು ಪ್ರಾರ್ಥಿಸೋಣ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ನಗರದ ಯೋಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಂಕರ ಜಯಂತಿ ದಾರ್ಶನಿಕ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗುರು ಎಂಬ ಶಬ್ದದ ಅರಿವನ್ನು ಜಗತ್ತಿಗೆ ತಿಳಿಸಿದವರು ಶಂಕರರು. ಅಜ್ಞಾನದ ಜ್ವರದಿಂದ ಮಲಗಿದ್ದ ಭಾರತವನ್ನು ಜ್ಞಾನದ ಚುಚ್ಚುಮದ್ದನ್ನು ನೀಡಿ ಎಬ್ಬಿಸಿದ್ದಾರೆ. ಶಂಕರರು ಸಾವಿರಾರು ಸ್ತೋತ್ರಗಳನ್ನು ರಚಿಸಿದ್ದಾರೆ. ವಿಸ್ತಾರವಾದ ಸ್ತೋತ್ರ ಸಾಹಿತ್ಯ ಕೊಟ್ಟಿರುವುದು ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗಿದೆ. ರಾಮಕೃಷ್ಣ ಪರಮಹಂಸರ ಚಿಂತನೆ ಶಂಕರಾಚಾರ್ಯರ ಚಿಂತನೆಗೆ ಬಹಳ ಹತ್ತಿರವಾಗಿವೆೆ. ಹಾಗಾಗಿ ಪ್ರತಿವರ್ಷ ಶಂಕರ ಜಯಂತಿಗೆ ರಾಮಕೃಷ್ಣ ಮಠದ ಯತಿಗಳನ್ನು ನಾವು ಆಹ್ವಾನಿಸುತ್ತೇವೆ ಎಂದರು.

ತುಮಕೂರು ಮಾದಿಹಳ್ಳಿ ರಾಮಕೃಷ್ಣ ಮಠದ ಮಂಗಲಾಥಾನಾಂದ ಸ್ವಾಮಿಗಳು ಆಶೀರ್ವಚನ ನೀಡಿ, ಶಂಕರಾಚಾರ್ಯರ ಜ್ಞಾನದ ಆಳವನ್ನು ಸಾಮಾನ್ಯ ಜೀವಿ ಅಳೆಯಲು ಸಾಧ್ಯವಿಲ್ಲ. ವೇದವನ್ನು ಒಪ್ಪಬೇಕು. ವೈದಿಕ ಧರ್ಮ ಉಳಿಸಬೇಕು. ಸರ್ವಯುಗಕ್ಕೂ ವೇದವೇ ಸತ್ಯ. ಮೊದಲು ಕರ್ಮದಲ್ಲಿ ನೆಲೆ ನಿಲ್ಲಬೇಕು. ಆಗ ಜ್ಞಾನದ ದಾರಿ ತೆರೆಯುತ್ತದೆ ಎಂದರು.

ಆತ್ಮಜ್ಞಾನದ ವಿಚಾರವನ್ನು ನಮ್ಮಲ್ಲಿ ಪ್ರತಿದಿನ, ಪ್ರತಿಕ್ಷಣ ಜಾಗೃತಿಗೊಳಿಸಿಕೊಳ್ಳಬೇಕು. ನಮ್ಮ ದೇಶ ಉಳಿಸಿರುವುದು ವೇದಾಂತ. ಬಂಧನಕ್ಕೆ ಮೂಲ ಕಾರಣ ತಿಳಿಯದಿದ್ದರೆ, ಮೋಕ್ಷ ಸಿಗಲು ಸಾಧ್ಯವಿಲ್ಲ. ವೇದಾಂತ ಆಳವಾಗಿ ಅಧ್ಯಯನ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರ- ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು.

ತಮ್ಮಣ್ಣ ಬೀಗಾರ ಮಾತನಾಡಿ, ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾನೆ. ಮಕ್ಕಳು ಹಾಗೂ ಪ್ರಕೃತಿ ಆರಾಧಿಸುತ್ತಾ ಬಂದಿದ್ದೇನೆ. ಜಗತ್ತಿನ ಸಮಸ್ತರ ಜೀವನ ಶಾಂತಿ-ನೆಮ್ಮದಿಯಿಂದ ಇರಬೇಕು ಎಂದು ದಾರ್ಶನಿಕರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಕೃತಿಯು ನಮಗೆ ಜೀವನದ ಪಾಠ ಕಲಿಸುತ್ತದೆ. ಶುದ್ಧ ಮನಸು ಮಕ್ಕಳಲ್ಲಿ ಇರುತ್ತದೆ. ಮಕ್ಕಳ ಸ್ವಭಾವ ಇಟ್ಟುಕೊಂಡು ಹೋದರೆ ನಮಗೆ ಜೀವನದುದ್ದಕ್ಕೂ ಚೈತನ್ಯ ತುಂಬುತ್ತದೆ ಎಂದರು.

ಈ ಸಂದರ್ಭದಲ್ಲಿ ಖ್ಯಾತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರಿಗೆ ಸಾಧನಾ ಶಂಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯೋಗ ಮಂದಿರದಲ್ಲಿ ಗುರುವಾರ ಬೆಳಗ್ಗೆಯಿಂದ ಮಾತೆಯರಿಂದ ಶ್ರೀ ಶಾಂಕರ ಸ್ತೋತ್ರ ಪಾರಾಯಣ ನಡೆಯಿತು.

ಸೋಂದಾ ಸ್ವರ್ಣವಲ್ಲೀ ಮಠದ ಕಿರಿಯ ಶ್ರೀಗಳಾದ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿಯ ವೇದಾಂತ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಗಣಪತಿ ಭಟ್ಟ ಇದ್ದರು. ವಿದ್ವಾನ್ ಶಂಕರ ಭಟ್ ಉಂಚಳ್ಳಿ ಸ್ವಾಗತಿಸಿ ನಿರ್ವಹಿಸಿದರು.