ಜಿಲ್ಲೆ

ಮುಷ್ಕರಕ್ಕೆ ಸ್ಪಂದಿಸದ ಜಿಲ್ಲೆಯ ಜನತೆ

ಮಂಡ್ಯ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ, ಪೌರತ್ವ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಜನರ ಸ್ಪಂದನೆ ಸಿಗಲಿಲ್ಲ.

ಜಿಲ್ಲೆಯಲ್ಲಿ ಜನಜೀವನ ಯಥಾಸ್ಥಿತಿಯಲ್ಲಿತ್ತು. ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಬೆಳಗ್ಗೆ ಖಾಸಗಿ ಬಸ್‌ಗಳ ಸಂಚಾರ ವಿಳಂಬವಾಗಿತ್ತು. ನಂತರ ಅದು ಕೂಡ ಯಥಾಸ್ಥಿತಿಗೆ ಬಂತು.

ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಅಲ್ಲಿಯೇ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂ ನಿಗದಿ ಮಾಡಬೇಕು. ಕಾರ್ಪೊರೇಟ್ ಬಂಡವಾಳದ ಪರವಾಗಿ ಮತ್ತು ಕಾರ್ಮಿಕ ವಿರೋಧಿಯಾದ ಕಾರ್ಮಿಕ ಕಾನೂನುಗಳ ಸಂಹಿತೀಕರಣವನ್ನು ವಿರೋಧಿಸಿ, ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ತೆರೆಯಬೇಕೆಂದು ಆಗ್ರಹಿಸಿದರು.

ಎಲ್ಲರಿಗೂ ಸರ್ಕಾರದಿಂದಲೇ 10,000 ರೂ. ಪಿಂಚಣಿ ಜಾರಿ ಮಾಡಬೇಕು. ಆರ್ಥಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳ ವಿರುದ್ಧ, ಈ ನೀತಿಗಳಿಂದಾಗಿ ಉದ್ಯೋಗ ಕಸಿದುಕೊಳ್ಳುತ್ತಿರುವ ಕಾರ್ಮಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ ಮತ್ತು ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.

ಬೀದಿಬದಿ, ಬೀಡಿ, ಮನೆಗೆಲಸ, ಆಟೋ, ಟೈಲರ್, ಹಮಾಲಿ ಸೇರಿ ವಿವಿಧ ಕಸುಬು ಆಧಾರಿತ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಾಗಿ ಶಾಸನ ಬದ್ಧ ನಿಧಿ ಮತ್ತು ಪಿಂಚಣಿ ಜಾರಿ ಮಾಡಬೇಕು.
ಗ್ರಾಮೀಣ ಜನರ ಸಂಕಷ್ಟ ಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಹೂಡಿಕೆ ಮಾಡಿ, ಬೆಲೆ ನಿಯಂತ್ರಣ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಸಂಗ್ರಹ ಸೌಲಭ್ಯಗಳೊಂದಿಗೆ ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿಗಾಗಿ, ರೈತರು ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ 24 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಹೊಸಹಳ್ಳಿ ವೃತ್ತದ ತನಕ ಮೆರವಣಿಗೆ: ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಮೆರವಣಿಗೆ ಮಾಡಲು ಸಾಕಷ್ಟು ಹರಸಾಹಸ ಮಾಡಿದರೂ ಪೊಲೀಸರು ಅವಕಾಶ ನೀಡಿರಲಿಲ್ಲ.

2 ಗಂಟೆಗೂ ಹೆಚ್ಚುಕಾಲ ಉದ್ಯಾನದಿಂದ ರಸ್ತೆಗೆ ಯಾರೊಬ್ಬರೂ ಇಳಿಯಲು ಅವಕಾಶ ನೀಡದೆ ತಡೆದಿದ್ದರು. ತೀವ್ರ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಪಾರ್ಕ್‌ನಿಂದ ವಿವಿ ರಸ್ತೆ ಮೂಲಕ ನಗರದ ಹೊಸಹಳ್ಳಿ ವೃತ್ತದ ತನಕ ಮೆರವಣಿಗೆಗೆ ಅವಕಾಶ ಕಲ್ಪಿಸಿದರು. ಹೊಸಹಳ್ಳಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು. ನಗರದ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು.