ಗೋಣಿಕೊಪ್ಪ : ನೂತನ ಸಂಸದರ ಮೇಲೆ ಕೊಡಗಿನ ಜನತೆ ಬಹುದೊಡ್ಡ ಆಶಾವಾದ ಇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಹೈಸೊಡ್ಲುರಿನ ಹೊಟ್ಟೇಂಗಡ ಎನ್.ರಮೇಶ್ ಹೇಳಿದ್ದಾರೆ.
ಗ್ರಾಮೀಣ ರಸ್ತೆ ಸೇರಿದಂತೆ ಕೊಡಗಿನ ಸಮಗ್ರ ರಸ್ತೆ ಅಭಿವೃದ್ಧಿ ಎಂಬುದು ಜಿಲ್ಲೆಯ ಜನರ ಬಹುದೊಡ್ಡ ಬೇಡಿಕೆ. ಇದನ್ನು ಹಲವು ದಶಕಗಳಿಂದ ಜನಪ್ರತಿನಿಧಿಗಳ ಬಳಿ ಮುಂದಿಡುತ್ತಾ ಬಂದಿದ್ದಾರೆ. ಜನರ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಈಡೇರಲಿಲ್ಲ. ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳು ಬಹಳಷ್ಟು ಹದಗೆಟ್ಟಿದೆ. ಹಲವಾರು ವರ್ಷಗಳಿಂದ ಡಾಂಬರು ಕಂಡಿಲ್ಲ. ಇವುಗಳನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿಪಡಿಸಲು ಸಂಸದರು ಮೊದಲ ಆದ್ಯತೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಮತದಾರರು ಬಿಜೆಪಿ ಪಕ್ಷದತ್ತ ಒಲವು ತೋರಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಮರುಳಾಗದೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಕೊಡಗಿನ ಜನರ ಮತಗಳೇ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚಿಸಲು ಕಾರಣವಾಗಿದೆ. ಇದನ್ನು ನೂತನ ಸಂಸದರು ವಿಶೇಷವಾಗಿ ಪರಿಗಣಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಕೊಡಗಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.
ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಪ್ರತಾಪ್ ಸಿಂಹ, ಕೊಡಗಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಇವರ ಅವಧಿಯಲ್ಲಿ ಕೊಡಗಿಗೆ ಯಾವುದೇ ಬಹುಜನೋಪಯೋಗಿ ಯೋಜನೆಗಳು ಜಾರಿಯಾಗಲಿಲ್ಲ. ಕೇವಲ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದ ಪ್ರತಾಪ್ ಸಿಂಹ ಅಭಿವೃದ್ಧಿ ವಿಚಾರದಲ್ಲಿ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರವನ್ನು ಮಾತ್ರ ಬಿಜೆಪಿ ಗೆಲ್ಲುವಂತಾಯಿತು. ಇದು ಪ್ರತಾಪ್ ಸಿಂಹ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿತ್ತು. ಇದೆಲ್ಲವನ್ನು ಪರಿಗಣಿಸಿಯೇ ಪ್ರತಾಪ್ ಸಿಂಹ ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು ಎಂದು ವಿಶ್ಲೇಷಿಸಿದರು.
ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಚೇತರಿಸಿಕೊಂಡಿದೆ. ಈ ಗೆಲುವಿನಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ. ಇದನ್ನು ಪಕ್ಷದ ನಾಯಕರು ಸಮರ್ಥವಾಗಿ ಬಳಸಿಕೊಳ್ಳಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಕಾಂಗ್ರೆಸ್ ಪಕ್ಷದ ಹಣ ಬಲದ ರಾಜಕೀಯ ಇನ್ನು ಜಿಲ್ಲೆಯಲ್ಲಿ ನಡೆಯುವುದಿಲ್ಲ. ಆದರೆ ಎರಡೂ ಕ್ಷೇತ್ರಗಳಲ್ಲಿ ಸಮರ್ಥ ನಾಯಕರನ್ನು ಈಗಿನಿಂದಲೇ ಕಣಕ್ಕಿಳಿಸಿ ತಯಾರು ಮಾಡಬೇಕು ಎಂದು ರಮೇಶ್ ಅವರು ಸಲಹೆ ನೀಡಿದ್ದಾರೆ.