ಜಿಲ್ಲೆ

ಪುರಸಭೆ ಎಡವಟ್ಟಿಗೆ ಹೈರಾಣಾದ ಜನ

ಪುರಸಭೆ ಎಡವಟ್ಟಿಗೆ ಹೈರಾಣಾದ ಜನ

ಮಧುಗಿರಿಯಲ್ಲಿ ಅವೈಜ್ಞಾನಿಕ ಯುಜಿಡಿ ಕಾಮಗಾರಿ | ರಸ್ತೆ ಹದಗೆಡಿಸಿದ್ದೇ ಸಾಧನೆ

ಮಾರುತಿ ಪ್ರಸನ್ನಕುಮಾರ್​ ಮಧುಗಿರಿ

ಪಟ್ಟಣದ ಅಭಿವೃದ್ಧಿಗೆಂದು ಕೈಗೊಂಡ ಯುಜಿಡಿ ಕಾಮಗಾರಿ ಅವೈಜ್ಞಾನಿಕ ಮತ್ತು ವಿಳಂಬದಿಂದ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದು, ಪಟ್ಟಣವಾಸಿಗಳು ಹೈರಾಣಾಗಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್​ಗಳಿದ್ದು, ಕೆ.ಎನ್​.ರಾಜಣ್ಣ ಈ ಹಿಂದಿನ ಅವಧಿಯಲ್ಲಿ ಯುಜಿಡಿ ಕಾಮಗಾರಿ ಮಂಜೂರು ಮಾಡಿಸಿದ್ದರು. 2019ರ ಸೆಪ್ಟೆಂಬರ್​ 10ರಂದು ಕಾಮಗಾರಿ ಆರಂಭಗೊಂಡಿದ್ದು, 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಯುಜಿಡಿ ಕಾಮಗಾರಿ ನೆಪದಲ್ಲಿ ಪಟ್ಟಣದ ಬಹುತೇಕ ರಸ್ತೆಗಳನ್ನು ಅಗೆದು ಹಾಗೇ ಬಿಡಲಾಗಿದೆ. ರಸ್ತೆಗಳಲ್ಲಿ ಬಿದ್ದ ಗುಂಡಿಗಳಲ್ಲೇ ವಾಹನಗಳು ಸಂಚರಿಸುವುದರಿಂದ ಗುಂಡಿಗಳು ಏಕಾಏಕಿ ಕುಸಿಯುತ್ತಿವೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಪ್ರಕರಣಗಳೂ ವರದಿಯಾಗಿವೆ. ಇನ್ನು ಗುಂಡಿಗಳಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಕಾರು, ಟ್ರಾ$್ಯಕ್ಟರ್​ಗಳೆಷ್ಟು ಎಂಬುದು ಲೆಕ್ಕಕ್ಕಿಲ್ಲ. ಇದೇ ಯುಜಿಡಿ ಅಧಿಕಾರಿಗಳ 5 ವರ್ಷಗಳ ಸಾಧನೆ.

23 ವಾರ್ಡ್​, 64 ಕಿಮೀ ವ್ಯಾಪ್ತಿ: ಪಟ್ಟಣದ ಎಲ್ಲ 23 ವಾರ್ಡ್​ಗಳು ಸೇರಿ ಒಟ್ಟು 35.76 ಕೋಟಿ ರೂ.ವೆಚ್ಚದಲ್ಲಿ 64 ಕಿಮೀ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ ಒಟ್ಟು 2,350 ಗುಂಡಿಗಳನ್ನು ನಿರ್ಮಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಶೇ.85 ಕಾಮಗಾರಿ ಪೂರ್ಣಗೊಂಡಿದ್ದು, ಶೇ.15 ಅಂದರೆ 700 ಮೀಟರ್​ ಕಾಮಗಾರಿ ಬಾಕಿ ಇದೆ. ಕೆಲ ಭಾಗಗಳಲ್ಲಿ ಬಂಡೆಗಲ್ಲು ಸಿಕ್ಕ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಡಿಸೆಂಬರ್​ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಂಬಂಧಿತ ಇಂಜಿನಿಯರ್​ಗಳು ಹೇಳುತ್ತಿದ್ದಾರೆ.

₹2 ಸಾವಿರದವರೆಗೆ ಠೇವಣಿ

ಮನೆಯವರೇ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಯುಜಿಡಿ ಕನೆನ್​ ಪಡೆದುಕೊಳ್ಳಬೇಕು. ಕೆಳ ಹಂತದ ಮನೆಗಳಿಗೆ ಸಂಪರ್ಕಕ್ಕಾಗಿ 1 ಸಾವಿರ ರೂ., ಮೊದಲನೇ ಮಹಡಿಗೆ 1,500 ರೂ. ಮತ್ತು ಎರಡನೇ ಮಹಡಿಯ ಮನೆಗಳಿಗೆ 2 ಸಾವಿರ ರೂ. ಠೇವಣಿ ನಿಗದಿಗೊಳಿಸಲಾಗಿದ್ದು, ಸಂಪರ್ಕ ಪಡೆದ ನಂತರ ಪ್ರತಿ ತಿಂಗಳು ನೀರಿನ ಕರದ ಜತೆಗೆ 15 ರೂ. ಯುಜಿಡಿ ಕರ ಪಾವತಿಸಬೇಕಿದೆ.

ಮಳೆ ತಂದ ಅವಾಂತರ

ಜಡಿ ಮಳೆಯಿಂದಾಗಿ ಪಟ್ಟಣದ ಕೆಲ ವಾರ್ಡ್​ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ. ವಾರ್ಡ್​ ಗಳಲ್ಲಿನ ರಸ್ತೆಗಳು ಕುಸಿದಾಗ ಅಧಿಕಾರಿಗಳು ಕಾಟಾಚಾರಕ್ಕೆ ಮಣ್ಣು ಸುರಿಯುತ್ತಾರೆ. ಮತ್ತೆ ಮಳೆಯಾದಾಗ ರಸ್ತೆಗಳು ಕೆಸರು ಗದ್ದೆಗಳಾಗುತ್ತವೆ. ದ್ವಿಚಕ್ರವಾಹನ ಸವಾರರು ಪಟ್ಟಣದ ಕೆಲ ರಸ್ತೆಗಳಲ್ಲಿ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ಕೆಲವಾರ್ಡ್​ಗಳಲ್ಲಿ ಮಳೆ ನೀರಿನೊಂದಿಗೆ ಕೊಳಚೆ ನೀರೂ ಮನೆಗಳಿಗೆ ನುಗ್ಗಿದೆ.

3 ತಿಂಗಳಾದರೂ ಇಲ್ಲ ದುರಸ್ತಿ

ಆಳವಾದ ಗುಂಡಿಗಳನ್ನು ನಿರ್ಮಿಸಿದಾಗ, ಯುಜಿಡಿ ಪೈಪ್​ಗಳನ್ನು ಅಳವಡಿಸಲು ರಸ್ತೆ ಮಧ್ಯೆ ಟ್ರಂಚ್​ ಹೊಡೆದಿದ್ದರೆ ಅದನ್ನು ಮುಚ್ಚಬೇಕಾದ ಹೊಣೆ ಯುಜಿಡಿಯವರದ್ದು. ಆದರೆ ರಸ್ತೆಗಳಿಗೆ ತೇಪೆ ಹಾಕಲು ಜಲ್ಲಿ ಸುರಿದು ತಿಂಗಳುಗಳೇ ಕಳೆದರೂ ಅಧಿಕಾರಿಗಳು ಅತ್ತ ತಲೆ ಹಾಕುತ್ತಿಲ್ಲ. ಅದರಲ್ಲೂ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಜಾಮೀಯಾ ಮಸೀದಿ ಮುಂಭಾಗದಲ್ಲಿ 3 ತಿಂಗಳಿಂದ ಯುಜಿಡಿ ಗುಂಡಿಯಿಂದ ನೀರು ಹೊರಬಂದು ರಸ್ತೆ ಮಧ್ಯೆ ಹರಿಯುತ್ತಿದೆ. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದಾಗ ಗುಂಡಿಗೆ ಪೈಪ್​ ಅಳವಡಿಸಿ ಪಕ್ಕದ ಚರಂಡಿಗೆ ನೀರು ಹರಿಬಿಟ್ಟು ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಪಟ್ಟಣದ ಬಹುತೇಕ ವಾರ್ಡ್​ಗಳಲ್ಲೂ ಇದೇ ದುಸ್ಥಿತಿ. ಈ ಬಗ್ಗೆ ಸ್ವತ ಪುರಸಭೆ ಸದಸ್ಯರೇ ಇತ್ತೀಚೆಗೆ ಪುರಸಭೆ ಸಾಮಾನ್ಯಸಭೆಯಲ್ಲಿ ಸಂಬಂಧಪಟ್ಟ ಇಂಜಿನಿಯರ್​ಗಳನ್ನು ತರಾಟೆ ತೆಗೆದುಕೊಂಡಿದ್ದರು.

ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೆಲ ಭಾಗದ ರಸ್ತೆಗಳಲ್ಲಿ ಮಣ್ಣು ಕುಸಿದು ತೊಂದರೆಯುಂಟಾಗಿದ್ದು, ಇವುಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಶೇ.85 ಕಾಮಗಾರಿ ಪೂರ್ಣಗೊಂಡಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. | ಸುಪ್ರಿಯಾ ಎಇಇ, ಯುಜಿಡಿ ಯುಜಿಡಿ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸಚಿವ ಕೆ.ಎನ್​.ರಾಜಣ್ಣ ಸೂಚಿಸಿದ್ದು, ಈ ಬ್ಗಗೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. | ಲಾಲಾಪೇಟೆ ಮಂಜುನಾಥ್​, ಪುರಸಭೆ ಅಧ್ಯಕ್ಷ, ಮಧುಗಿರಿ