ಜಿಲ್ಲೆ

ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯಕ್ಕೆ ಹೈರಾಣದ ಜನ

ಮನೆಗಳಿಗೆ ನುಗ್ಗುತ್ತಿರುವ ರಾಜಕಾಲುವೆ ನೀರು ಸ್ವಚ್ಛತೆಗೆ ಮುಂದಾಗದ ಆಡಳಿತ

ಎನ್.ವಿ.ವೆಂಕಟೇಶ್, ಗುಡಿಬಂಡೆ

ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ರಾಜ ಕಾಲುವೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಪಟ್ಟಣದಲ್ಲಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ದೊಡ್ಡ ದೊಡ್ಡ ಗಿಡಗಂಟಿ ಬೆಳೆದಿದ್ದು, ಕೆಲವೆಡೆ ಮರಗಳಾಗಿವೆ. ಈ ಅವ್ಯವಸ್ಥೆಗೆ ರಾಜಕಾಲುವೆ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ವಹಿಸಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ವಿಷ ಜಂತುಗಳು ನೀರಿನಲ್ಲಿ ಮನೆ ಸೇರಿಕೊಳ್ಳುತ್ತಿವೆ. ಅನೇಕ ಬಾರಿ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ರಾಜಕಾಲುವೆ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಪಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

ಬಳಕೆಯಾಗದ ಜೆಸಿಬಿ: ಪಟ್ಟಣದ ರಾಜಕಾಲುವೆ ಸ್ವಚ್ಛತೆ ಸೇರಿ ಅನೇಕ ಕೆಲಸಗಳಿಗಾಗಿ ಲಕ್ಷಗಟ್ಟಲೇ ಹಣ ವ್ಯಯ ಮಾಡಿ ಜೆಸಿಬಿ ಯಂತ್ರ ಖರೀದಿಸಲಾಗಿದೆಯಾದರೂ ಅದನ್ನು ಬಳಕೆ ಮಾಡುತ್ತಿಲ್ಲ. ಜೆಸಿಬಿ ಯಂತ್ರ ಬಳಕೆ ಮಾಡದೆ ಅದರ ಖರ್ಚು ವೆಚ್ಚಗಳು, ರಿಪೇರಿ ಎಂದು ಹೇಳಿ ಮತ್ತೆ ರಿಪೇರಿ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಬಿಲ್ ಮಾಡುತ್ತಾರೆ. ಆದರೆ, ಸ್ವಚ್ಛತೆ ಮಾತ್ರ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳು, ರಾಜಕಾಲುವೆ ಸ್ವಚ್ಛಗೊಳಿಸಲು ಮುಂದಾಗದ ಪಪಂ ಮುಖ್ಯಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದರು.

ಸ್ವಚ್ಛತೆಗೆ ಮುಂದಾದ ಜನರು

ಸ್ವಚ್ಛತೆ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನು ಅಧಿಕಾರಿಗಳು ಗುಳುಂ ಮಾಡುತ್ತಾರೆ. ಆದರೆ, ಸ್ವಚ್ಛತೆ ಮಾಡಿಸುವುದಿಲ್ಲ. ಅನೇಕ ವರ್ಷಗಳಿಂದ ರಾಜಕಾಲುವೆ ಸ್ವಚ್ಛಗೊಳಿಸದ ಕಾರಣ ನೀರು ಸರಾಗವಾಗಿ ಹೋಗದೆ ಮನೆಗಳಿಗೆ ನುಗ್ಗುತ್ತಿದ್ದು, ರಾತ್ರಿ ವೇಳೆ ನಿದ್ದೆ ಇಲ್ಲದಂತಾಗಿದೆ. ಅವಾಂತರ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಸ್ವಚ್ಛತೆಗೆ ಮುಂದಾಗಿದ್ದಾರೆ.

ಹಲವು ವರ್ಷಗಳಿಂದ ರಾಜ ಕಾಲುವೆ ಸ್ವಚ್ಛಗೊಳಿಸದ ಕಾರಣ ಕಾಲುವೆಯಲ್ಲಿ ದೊಡ್ಡ ಗಿಡಗಂಟಿಗಳು ಬೆಳೆದಿವೆ. ಈಗ ಮಳೆ ಬೀಳುತ್ತಿದ್ದು, ನೀರು ಸರಾಗವಾಗಿ ಹರಿಯಲಾಗದೆ ಮನೆಗಳಿಗೆ ನುಗ್ಗುತ್ತಿದೆ. ಸಮಸ್ಯೆಯ ಬಗ್ಗೆ ಕೇಳಲು ಪಪಂ ಕಚೇರಿಗೆ ಹೋದರೆ ಅಲ್ಲಿ ಮುಖ್ಯಾಧಿಕಾರಿಗಳೇ ಇರುವುದಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳುವುದು, ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದರೆ ಪಪಂ ಮುಖ್ಯಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ವಹಿಸಬೇಕು. - ನವೀನ್, ಗುಡಿಬಂಡೆ ಪಟ್ಟಣದ ನಿವಾಸಿ ಪಟ್ಟಣದ ರಾಜಕಾಲುವೆ ಸ್ವಚ್ಛಗೊಳಿಸವಂತೆ ಪಪಂ ಮುಖ್ಯಾಧಿಕಾರಿಯವರಿಗೆ ತಿಳಿಸಲಾಗಿದೆ. ಕೆಲವೇ ದಿನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಮಾಡುತ್ತೇನೆ ಎಂದಿದ್ದಾರೆ. ಸಾರ್ವಜನಿಕರಿಗೆ ಅಗುತ್ತಿರುವ ಸಮಸ್ಯೆ ತ್ವರಿತಗತಿಯಲ್ಲಿ ಸರಿಪಡಿಸಲಾಗುತ್ತದೆ. - ಎ.ವಿಕಾಸ್, ಅಧ್ಯಕ್ಷರು ಪಪಂ, ಗುಡಿಬಂಡೆ