ತಟ್ಟಳ್ಳಿ ಹಾಡಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಸುತ್ತಿರುವುದು. 
ಜಿಲ್ಲೆ

ಹಾಡಿಯ ಜನರಿಗೆ ಕೊನೆಗೂ ಸಿಕ್ಕಿತು ‘ಗಂಗಾಕಲ್ಯಾಣ’

ಸಿದ್ದಾಪುರ : ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಹಾಡಿಯ 10 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಿ ಕಾಮಗಾರಿ ಆರಂಭಿಸಲಾಗಿದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷ ಕಳೆದರೂ ಯೋಜನೆ ಫಲಾನುಭವಿಗಳನ್ನು ತಲುಪದ ಹಿನ್ನೆಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಮಾರ್ಚ್ 28 ರಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹಾಡಿಯ ಮೂಲ ನಿವಾಸಿಗಳು ತಮ್ಮ ಸಮಸ್ಯೆ ಬಿಚ್ಚಿಟ್ಟಿದ್ದರು. ಬಳಿಕ ಅರ್ಹ ರೈತರಿಗಿಲ್ಲ ಗಂಗಾ ಕಲ್ಯಾಣ ಭಾಗ್ಯ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ 60 ಜನ ಪಲಾನುಭವಿಗಳ ಪೈಕಿ 10 ಜನರಿಗೆ ಬೋರ್‌ವೆಲ್ ಕೊರೆಸಿ ಯೋಜನೆ ಕಾಮಗಾರಿಪ್ರಾರಂಭ ಮಾಡಿದೆ.

ಬಡರೈತರು ನೀರಿನ ಸಮಸ್ಯೆಯಿಂದ ಮುಕ್ತಿಹೊಂದಿ ಕೃಷಿ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ರಾಜ್ಯ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಿದ್ದು, ಸರ್ಕಾರವೇ ಬೋರ್‌ವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ಮೋಟರ್ ಪಂಪ್ ಹಾಗೂ ಪೈಪ್‌ಗಳನ್ನು ನೀಡಿದೆ. ವಿಜಯವಾಣಿ ನಡೆಸಿದ ಸಂವಾದ ಕಾರ್ಯಕ್ರಮದಿಂದ ಇಂದು ಯೋಜನೆ ತಲುಪಿರುವ ಹಾಡಿಯ ಮೂಲ ನಿವಾಸಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.