ಜಿಲ್ಲೆ

ಕನ್ನಡ ರಾಜ್ಯೋತ್ಸವಕ್ಕೆ ಪಥಸಂಚಲನ ಮೆರುಗು, ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ ಉಸ್ತುವಾರಿ ಸಚಿವ ಅಶೋಕ್, ಸಾಧಕರಿಗೆ ಸನ್ಮಾನ

Bengaluru Rural

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಪಟ್ಟಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಪೊಲೀಸರ ಆಕರ್ಷಕ ಪಥ ಸಂಚಲನದಿಂದ ಸಾಂಗವಾಗಿ ನೆರವೇರಿತು.

ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದರೂ ಕನ್ನಡಾಭಿಮಾನಿಗಳ ಸಂಭ್ರಮ ಸಡಗರ ರಾಜ್ಯೋತ್ಸವದ ಮೆರುಗು ಹೆಚ್ಚಿಸಿತು. ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಪಥಸಂಚಲನ ವೀಕ್ಷಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಡಿಸಿ ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ಜಿಪಂ ಪ್ರಭಾರ ಅಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮತ್ತಿತರರು ಬಲೂನ್ ಹಾರಿ ಬಿಡುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾದರು.

ಪುಸ್ತಕ ಜೋಳಿಗೆ ಆರಂಭ: ಉಸ್ತುವಾರಿ ಸಚಿವ ಆರ್.ಅಶೋಕ್ ಪುಸ್ತಕ ಮಾರಾಟದ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇವನಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಕನ್ನಡ ಪುಸ್ತಕಗಳನ್ನು ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದರು. ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತೆ ಮನವಿ ಮಾಡಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ, ಡಿಸಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಜಿಪಂ ಸಿಇಒ ಎನ್.ಎಂ.ನಾಗರಾಜ ಇತರ ಗಣ್ಯರು ಭಾಗವಹಿಸಿದ್ದರು.

ಐವರು ಸಾಧಕರಿಗೆ ಸನ್ಮಾನ: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ವಿಜಯವಾಣಿ ಬಿಡಿ ವರದಿಗಾರ ರಾಮೇಗೌಡ, ದೊಡ್ಡಬಳ್ಳಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್, ಜಾನಪದ ಕಲಾವಿದೆ ಕೆ.ನಾಗರತ್ನಮ್ಮ, ಅಂತಾರಾಷ್ಟ್ರೀಯ ಯೋಗಪಟು ಎ.ಗಾನಶ್ರೀ, ದೇವನಹಳ್ಳಿ ನಿವೃತ್ತ ಮುಖ್ಯಶಿಕ್ಷಕ ರಾಮಯ್ಯ ಅವರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಚಿವರಿಂದ ರಾಜ್ಯೋತ್ಸವ ಸಂದೇಶ: ರಾಜ್ಯ ಏಕೀಕರಣಗೊಂಡು 64 ವರ್ಷ ಪೂರ್ಣಗೊಂಡು, 65ನೇ ವರ್ಷಕ್ಕೆ ಪದಾರ್ಪಣೆ ಮಾಡುವ ಈ ಘಳಿಗೆಯಲ್ಲಿ ಕರ್ನಾಟಕ ಮತ್ತು ಜಿಲ್ಲೆಯಾದ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರಿಕರು ಸೌಹಾರ್ದಯುತ ಮತ್ತು ಸಹಬಾಳ್ವೆ ನಡೆಸುವಂತಾಗಲಿ ಎಂದು ಸಚಿವ ಆರ್.ಅಶೋಕ್ ಹಾರೈಸಿದರು.

ಕನ್ನಡ ನಾಡು-ನುಡಿ ಬಗ್ಗೆ ರಾಷ್ಟ್ರಕವಿ ಕುವೆಂಪು ರಚಿಸಿದ ‘ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಗೀತೆಯನ್ನು ಮೆಲುಕು ಹಾಕಿದರು.

ಕರೊನಾ ಕಾರಣದಿಂದ ಈ ಬಾರಿ ಸರಳವಾಗಿ ರಾಜ್ಯೋತ್ಸವ ಆಚರಣೆ ಅನಿವಾರ್ಯವಾಗಿದೆ. ಮುಂದಿನ ಬಾರಿ ಇದೇ ದಿನವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.