ಸುನಿಲ್ ಪೊನ್ನೇಟಿ ಮಡಿಕೇರಿ:
ಒಂದಕ್ಕಿAತ ಒಂದು ಬಗೆ ಬಗೆಯ ಬಣ್ಣದ, ವಿವಿಧ ಗಾತ್ರದ, ವೈವಿಧ್ಯಮಯ ರುಚಿಯ ಪಪ್ಪಾಯಿ ಹಣ್ಣುಗಳು, ಟೇಬಲ್ ಟೆನ್ನಿಸ್ ಬಾಲ್ ಗಾತ್ರದಿಂದ ಟೆನ್ನಿಸ್ ಬಾಲ್ ಗಾತ್ರದ ತನಕ ತರಾವಾರಿ ಗಾತ್ರ, ಆಕಾರ, ಬಣ್ಣದ ಪ್ಯಾಶನ್ ಫ್ರೂಟ್‌ಗಳು…ಇವುಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಪ್ರಯೋಗಶೀಲ ಬೆಳೆಗಾರರು. ಇದು ಬುಧವಾರ ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ.
ಒಂದು ಕಾಲದಲ್ಲಿ ಏಲಕ್ಕಿ, ಜೇನು, ಕಿತ್ತಳೆಯಿಂದ ಹೆಸರು ಮಾಡಿದ್ದ ಕೊಡಗು ಕಳೆದ ಕೆಲವು ದಶಕಗಳಲ್ಲಿ ಕಾಫಿ ನಾಡಾಗಿ ಪ್ರವರ್ಧಮಾನಕ್ಕೆ ಬಂದಿದೆ. ಜತೆಯಲ್ಲಿ ಕರಿಮೆಣಸು ಕೂಡ ಇಲ್ಲಿನ ಕೃಷಿಕರ ಆದಾಯದ ಪ್ರಮುಖ ಮೂಲವಾಗಿ ಗುರುತಿಸಿಕೊಂಡಿದೆ. ಆದರೆ ಏರುತ್ತಿರುವ ಕಾಫಿ ತೋಟದ ನಿರ್ವಹಣಾ ವೆಚ್ಚ, ಬೆಲೆಯ ಅನಿಶ್ಚ್ಚಿತತೆ ಬೆಳೆಗಾರರನ್ನು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ರ‍್ಯಾಂಬುಟನ್, ಬಟರ್‌ಫ್ರೂಟ್, ಫ್ಯಾಷನ್ ಫ್ರೂಟ್ ಸೇರಿದಂತೆ ವಿದೇಶಿ ತಳಿಯ ಹಣ್ಣುಗಳನ್ನು ಕಾಫಿ ತೋಟಗಳಲ್ಲಿ ಉಪ ಬೆಳೆಗಳಾಗಿ, ಮತ್ತೆ ಕೆಲವರು ಮುಖ್ಯ ಬೆಳೆಗಳನ್ನಾಗಿಯೂ ಬೆಳೆಯುವ ಮೂಲಕ ಕೃಷಿಯಲ್ಲಿ ಆರ್ಥಿಕ ಸ್ಥಿರತೆ ಕಂಡುಕೊಳ್ಳಲು ಪ್ರಗತಿಪರ ಉಪಾಯಗಳನ್ನು ಮಾಡುತ್ತಿದ್ದಾರೆ. ಹೆಚ್ಚಿನವರು ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಕಾಲಕ್ಕೆ ಅನುಗುಣವಾಗಿ ಲಾಭದಾಯಕ ಬೆಳೆಗಳ ಕಡೆಗೆ ಮುಖ ಮಾಡುವ ಕೃಷಿಕರಿಗೆ ಕುಶಾಲನಗರ ತಾಲೂಕು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮತ್ತು ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಬೆನ್ನೆಲುಬಾಗಿ ನಿಂತಿದ್ದು ಪ್ರಗತಿಪರ ಕೃಷಿಕರ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಆಧುನಿಕತೆಯತ್ತ ತೆರೆದುಕೊಳ್ಳಲು ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಸವಿರುಚಿಗೆ ಹೆಸರಾದ ಕೊಡಗಿನ ಕಿತ್ತಳೆ ಬಗೆಗಿನ ಸಂಶೋಧನೆಗಳಿಗಾಗಿ ಸ್ವಾತಂತ್ರö್ಯ ಪೂರ್ವದಲ್ಲೇ ಆರಂಭವಾದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ೧೯೫೮ರಲ್ಲೇ ಕೂರ್ಗ್ ಹನಿ ಡ್ಯೂ ಎನ್ನುವ ಪಪ್ಪಾಯ ತಳಿಯನ್ನು ರೂಪಿಸಿತ್ತು. ಪಪ್ಪಾಯ ಗಿಡಗಳಿಗೆ ಸಾಮಾನ್ಯವಾಗಿ ಬಾಧಿಸುವ ವೈರಸ್ ರೋಗಗಳ ವಿರುದ್ಧ ಈ ಪಪ್ಪಾಯ ತಳಿ ಹೆಚ್ಚು ನಿರೋಧಕ ಶಕ್ತಿ ಹೊಂದಿದೆ. ಗುಜರಾತ್ ಮತ್ತು ರಾಜಾಸ್ತಾನದಲ್ಲಿ ಈಗಲೂ ಈ ಹಣ್ಣಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ.
ನಂತರದ ದಿನಗಳಲ್ಲಿ ರ‍್ಯಾಂಬುಟನ್, ಬಟರ್‌ಫ್ರೂಟ್, ಮಾಡಹಾಗಲ ರೀತಿಯ ಹಣ್ಣು-ತರಕಾರಿಗಳ ತಳಿ ಸಂವರ್ಧನೆಯಲ್ಲೂ ತೊಡಗಿಸಿಕೊಂಡಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮೂಲ ತಳಿಗಳ ಗುಣಗಳನ್ನು ಮತ್ತಷ್ಟು ಉತ್ತಮಪಡಿಸಿ ಸ್ಥಳೀಯ ಹವಾಮಾನಕ್ಕೆ ಒಗ್ಗುವಂತಹ ತಳಿಗಳನ್ನು ರೂಪಿಸಿ ಕೃಷಿಕರಿಗೆ ಕೊಡುವ ಮೂಲಕ ಕೃಷಿಕರ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ಕೊಡುತ್ತಿದೆ.
ಇದರ ಜತೆಗೆ ಆಗಾಗ್ಗೆ ಋತುಮಾನಕ್ಕೆ ಅನುಗುಣವಾಗಿ ವಿವಿಧ ಹಣ್ಣು, ತರಕಾರಿಗಳಿಗೆ ಸಂಬAಧಿಸಿದAತೆ ಮೇಳಗಳು, ಪ್ರದರ್ಶನಗಳು, ಚರ್ಚೆಗಳು, ಮಾಹಿತಿ ಕಾರ್ಯಗಾರಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಡಯಟ್ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪಪ್ಪಾಯ ಮತ್ತು ಜ್ಯೂಸ್, ವೈನ್‌ಗಳಿಗೆ ವ್ಯಾಪಕವಾಗಿ ಬಳಕೆಯಾಗುವ ಪ್ಯಾಷನ್ ಫ್ರೂಟ್‌ಗಳ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ಬುಧವಾರ ಇಲ್ಲಿ ಗಮನ ಸೆಳೆಯಿತು.
ದೂರದ ಮೂಡಬಿದಿರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಸಕ್ತ ಕೃಷಿಕರು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಪ್ಪಾಯ ಮತ್ತು ಪ್ಯಾಷನ್ ಫ್ರೂಟ್‌ಗಳ ಬಗೆಗಿನ ಆಸಕ್ತಕರ ಮಾಹಿತಿಗಳನ್ನು ಪಡೆದುಕೊಂಡರು. ರಾಜ್ಯದ ವಿವಿಧೆಡೆ ಬೆಳೆದ ೭೦ ಬಗೆಯ ಪಪಾಯಗಳು ಮತ್ತು ೪೦ ಬಗೆಯ ಪ್ಯಾಷನ್ ಫ್ರೂಟ್‌ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಬೆಳೆಗಾರರೊಬ್ಬರು ತಂದಿದ್ದ ತೈವಾನ್ ತಳಿಯ ಮಿಂಚುವ ಹಳದಿ ಬಣ್ಣದ ಪಪ್ಪಾಯ ಜನಾಕರ್ಷಣೆಯ ಕೇಂದ್ರವಾಗಿತ್ತು. ಗರ್ವಾಲೆಯ ತಳಿ ಸಂಶೋಧಕ ನಾಪಂಡ ಪೂಣಚ್ಚ ಅವರು ಪ್ರದರ್ಶನಕ್ಕೆ ಇಟ್ಟಿದ್ದ ಗರ್ವಾಲೆ ಪ್ಯಾಷನ್ ಫ್ರೂಟ್ ತನ್ನ ಚಿಕ್ಕ ಗಾತ್ರ, ರುಚಿ ಹಾಗೂ ಸುವಾಸನೆಯಿಂದ ಗಮನ ಸೆಳೆಯಿತು.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು ಮತ್ತು ಬೆಂಗಳೂರು ಐಐಎಚ್‌ಆರ್‌ನ ವಿಜ್ಞಾನಿಗಳು ಪಪ್ಪಾಯ ಮತ್ತು ಪ್ಯಾಷನ್ ಫ್ರೂಟ್ ಹಣ್ಣಿನ ವೈಜ್ಞಾನಿಕ ಬೆಳೆ ಪದ್ಧತಿ, ತಳಿ ಅಭಿವೃದ್ಧಿ, ಉತ್ತಮ ಕೃಷಿ ಪದ್ಧತಿ ಬಗ್ಗೆ ಕೃಷಿಕರಿಗೆ ಮಾಹಿತಿಗಳನ್ನು ನೀಡಿದರು. ಕೃಷಿಕರು ಕೂಡ ಆಸಕ್ತಿಯಿಂದ ಚರ್ಚೆಗಳಲ್ಲಿ ಪಾಲ್ಗೊಂಡು ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು.
ವಿಶೇಷ ಮತ್ತು ಉತ್ತಮ ಹಣ್ಣಿನ ಮಾದರಿ ಸ್ಪರ್ಧೆಯ ಪ್ಯಾಶನ್ ಫ್ರೂಟ್ ವಿಭಾಗದಲ್ಲಿ ಬೈಲಕುಪ್ಪೆಯ ರಾಜೇಶ್ ಪ್ರಥಮ, ಪೊನ್ನಂಪೇಟೆಯ ರವಿಶಂಕರ್ ದ್ವಿತೀಯ ಹಾಗೂ ನಂಜರಾಯಪಟ್ಟಣದ ಗೋಪಾಲನ್ ತೃತೀಯ ಬಹುಮಾನ ಪಡೆದುಕೊಂಡರು. ಪಪ್ಪಾಯ ವಿಭಾಗದಲ್ಲಿ ಚೆಟ್ಟಳ್ಳಿಯ ಮುಲ್ಲಂಡ ವಿವೇಕ್ ಉತ್ತಯ್ಯ ಪ್ರಥಮ, ಕಂಬಿಬಾಣೆಯ ರಂಶೀದ್ ದ್ವಿತೀಯ ಹಾಗೂ ನಾಪೋಕ್ಲುವಿನ ತಿಮ್ಮಯ್ಯ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಎರಡೂ ವಿಭಾಗಗಳಲ್ಲಿ ಕ್ರಮವಾಗಿ ೧೦ ಸಾವಿರ, ೭ ಸಾವಿರ ಹಾಗೂ ೩ ಸಾವಿರ ರೂ.ಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನೀಡಲಾಯಿತು.
ಆರೋಗ್ಯದ ಬಗ್ಗೆ ಕಾಳಜಿ ಇರುವರು ಪಪ್ಪಾಯ ಸೇವನೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಪಪ್ಪಾಯ ಹಣ್ಣಿಗೆ ಮಾರುಕಟ್ಟೆಯಲ್ಲಿ ಈಗ ಉತ್ತಮ ಬೇಡಿಕೆ ಇದೆ. ಆದರೆ ಆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಕೃಷಿಕರು ಮುಖ್ಯ ಬೆಳೆಯನ್ನಾಗಿಯೂ ಪಪ್ಪಾಯ ಬೆಳೆಯಬಹುದು. ಕೊಡಗಿನಲ್ಲೇ ಸಂಶೋಧಿಸಿದ ಕೂರ್ಗ್ ಹನಿ ಡ್ಯೂ ಪಪ್ಪಾಯಕ್ಕೆ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ತಳಿ ಹೆಚ್ಚಿನ ವೈರಸ್ ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ.
ಡಾ. ಶಂಕರನ್, ಮುಖ್ಯಸ್ಥ, ಹಣ್ಣಿನ ಬೆಳೆಗಳ ವಿಭಾಗ, ಐಐಎಚ್‌ಆರ್, ಬೆಂಗಳೂರು
ಚೆಟ್ಟಳ್ಳಿಯಲ್ಲಿ ಅಭಿವೃದ್ಧಿ ಪಡಿಸಲಾದ ಕಾವೇರಿ ಪ್ಯಾಷನ್ ಫ್ರೂಟ್ ಈ ಹಣ್ಣಿನಲ್ಲಿರುವ ಏಕೈಕ ಹೈಬ್ರಿಡ್ ತಳಿಯಾಗಿದೆ. ಇದರಲ್ಲಿ ನೇರಳೆ ಮತ್ತು ಅರಸಿನ ಬಣ್ಣದ ತಳಿಗಳಿವೆ. ಈ ತಳಿಯ ಹಣ್ಣುಗಳು ಹೆಚ್ಚು ಸಿಹಿಯಾಗಿದ್ದು, ಉತ್ತಮ ತಿರುಳು ಹೊಂದಿದೆ. ವಾಣಿಜ್ಯಕವಾಗಿಯೂ ಬೆಳೆದು ಲಾಭ ಗಳಿಸಬಹುದು. ಜ್ಯೂಸ್ ಮತ್ತು ವೈನ್ ತಯಾರಿಸಲು ಈ ಹಣ್ಣು ಬಳಕೆ ಆಗುತ್ತದೆ.
ಡಾ. ನಯನ್ ದೀಪಕ್ ಜಿ., ಹಣ್ಣು ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿ
ಕೊಡಗಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡು ಹಣ್ಣುಗಳಿವೆ. ಸಾಕಷ್ಟು ರುಚಿ ಮತ್ತು ಆರೋಗ್ಯಕ್ಕೆ ಉತ್ತಮ ಅಂಶಗಳು ಈ ಹಣ್ಣಿನಲ್ಲಿವೆ. ವೈಜ್ಞಾನಿಕವಾಗಿ ಇವುಗಳ ತಳಿ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು. ಕಾಡು ಹಣ್ಣುಗಳು ಸಾಮಾನ್ಯವಾಗಿ ಫಲ ಬಿಡಲು ದೀರ್ಘಾವಧಿ ತೆಗೆದುಕೊಳ್ಳುತ್ತದೆ. ಮರ ಅಥವಾ ಬಳ್ಳಿ ದೊಡ್ಡದಾಗಿಯೂ ಬೆಳೆಯುತ್ತದೆ. ಈ ನಕರಾತ್ಮಕ ಅಂಶಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ನಾನು ಅಭಿವೃದ್ಧಿಪಡಿಸಿರುವ ಗರ್ವಾಲೆ ಪ್ಯಾಷನ್ ಫ್ರೂಟ್ ಇದಕ್ಕೆ ಉತ್ತಮ ಉದಾಹರಣೆ.
ನಾಪಂಡ ಪೂಣಚ್ಚ, ಕೃಷಿಕ, ಗರ್ವಾಲೆ