ಜಿಲ್ಲೆ

ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳ ಪಕ್ಷವೇ ಅಧಿಕಾರಕ್ಕೆ !

ಯಲ್ಲಾಪುರ: ಕ್ಷೇತ್ರ ಮರು ವಿಂಗಡಣೆಯಿಂದಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಹುಟ್ಟಿಕೊಂಡ ನಂತರ ನಡೆದ ನಾಲ್ಕೂ ಚುನಾವಣೆಗಳಲ್ಲಿ ಇಲ್ಲಿ ಗೆದ್ದ ಪಕ್ಷದವರೇ ಅಧಿಕಾರಕ್ಕೆ ಬರುತ್ತಿರುವುದು ವಿಶೇಷವಾಗಿದೆ.

ಪ್ರಸ್ತುತ ಚುನಾವಣೆಯಲ್ಲಿಯೂ ಈ ಪರಂಪರೆ ಮುಂದುವರಿಯಲಿದೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಯಲ್ಲಾಪುರ, ಮುಂಡಗೋಡ ತಾಲೂಕುಗಳು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಸೇರಿ ಯಲ್ಲಾಪುರ ಕ್ಷೇತ್ರ ರಚನೆಯಾಗಿತ್ತು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್. ಪಾಟೀಲ ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಮ ಹೆಬ್ಬಾರ್ 25,000 ಮತಗಳ ಅಂತರದ ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವರಾಮ ಹೆಬ್ಬಾರ್ 1600 ಮತಗಳ ಅಂತರದಿಂದ ಗೆದ್ದರು. ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಒಂದೇ ವರ್ಷದ ಅಂತರದಲ್ಲಿ ರಾಜಕೀಯ ಮೇಲಾಟದಲ್ಲಿ ಮೈತ್ರಿ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹೆಬ್ಬಾರ್, ಉಪಚುನಾವಣೆಯಲ್ಲಿ 30,000 ಮತಗಳ ಅಂತರದ ಗೆಲುವು ಸಾಧಿಸಿ, ಸಚಿವರಾದರು. ಆಗಲೂ ಇಲ್ಲಿನ ಶಾಸಕರು ಆಡಳಿತ ಪಕ್ಷದವರೇ ಆದರು.

ಒಟ್ಟಾರೆ ಈವರೆಗೆ ನಡೆದ ನಾಲ್ಕೂ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರು ಆಯ್ಕೆಯಾಗುತ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಗದ್ದುಗೆಯೇರಿದೆ. ಈ ಬಾರಿಯೂ ಅಂತಹುದೇ ಪರಂಪರೆ ಮುಂದುವರಿಯಲಿದೆಯೇ? ಎಂಬುದಕ್ಕೆ ಮೇ 13 ರ ನಂತರ ಉತ್ತರ ಸಿಗಲಿದೆ.