ಜಿಲ್ಲೆ

ಸಾರ್ವಜನಿಕರಿಗೆ ಉದ್ಯಾನ ಮುಕ್ತ

Mysuru

ಮೈಸೂರು: ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ನಗರದ ಉದ್ಯಾನಗಳು ಒಂದೂವರೆ ತಿಂಗಳ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿವೆ.

ಮೂರನೇ ಹಂತದ ಲಾಕ್‌ಡೌನ್ ಸಡಿಲಗೊಳಿಸಿ ಉದ್ಯಾನ, ಸಲೂನ್, ಬ್ಯೂಟಿಪಾರ್ಲರ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ ವಾಯುವಿಹಾರಕ್ಕೆ ಜನರು ಆಗಮಿಸಿದ್ದರು. ಪರಿಣಾಮ ಅಂಗಳದಲ್ಲಿ ಜೀವಕಳೆ ತುಂಬಿತ್ತು. ವಾಯುವಿಹಾರಕ್ಕೆ ಆಗಮಿಸಿದ್ದವರು ಮುಖಕ್ಕೆ ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದ್ದರಿಂದ ಬಹುತೇಕರು ಮಾಸ್ಕ್ ಧರಿಸಿಯೇ ವಾಯುವಿಹಾರ ಮಾಡಿದರು.

ಮಾಸ್ಕ್ ಇಲ್ಲದೆ ಬಂದ ಕೆಲವರಿಗೆ ಕಾವಲುಗಾರರು ಮುಂದೆ ಮಾಸ್ಕ್ ಧರಿಸಿ ಬರುವಂತೆ ಸೂಚನೆ ನೀಡುತ್ತಿದ್ದ ದೃಶ್ಯ ಕಂಡು ಬಂತು.
ಸಾಮಾನ್ಯ ದಿನಗಳಲ್ಲಿ ಇದ್ದ ವಾಯುವಿಹಾರಿಗಳಿಗೆ ಹೋಲಿಕೆ ಮಾಡಿದರೆ ಈಗ ಸಂಖ್ಯೆ ಕಡಿಮೆ ಇತ್ತು. ನಿರಂತರವಾಗಿ ಬಾಗಿಲು ತೆರೆಯುವುದರಿಂದ ಮುಂದಿನ ದಿನಗಳಲ್ಲಿ ಜನರು ಹೆಚ್ಚು ಆಗಮಿಸಲಿದ್ದು, ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ.

ಕುಕ್ಕರಹಳ್ಳಿಕೆರೆ ದಂಡೆಯಲ್ಲಿ ವಾಯು ವಿಹಾರ ಮಾಡಲು ಈ ಹಿಂದೆಯೂ ಸಮಯ ನಿರ್ಬಂಧ ಇತ್ತು. ಈಗ ಅದು ಮುಂದುವರಿ ದಿದ್ದು, ಮುಂಜಾನೆ ಒಂದು ಗಂಟೆ, ಸಂಜೆ ಒಂದು ಗಂಟೆ ಕಡಿತಗೊಂಡಿದೆ. ವಾಯುವಿಹಾರಕ್ಕೆ ಬೆಳಗ್ಗೆ 7ರಿಂದ 9, ಸಂಜೆ 5 ರಿಂದ 7 ಗಂಟೆವರೆಗೆ ಮಾತ್ರ ಸಮಯಾವಕಾಶ ನಿಗದಿಪಡಿಸಲಾಗಿದೆ. ಜತೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎನ್ನುವ ಬರಹವುಳ್ಳ ಫಲಕವನ್ನು ಕೆರೆಯ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.

ನಗರದ ಪ್ರಮುಖ ಉದ್ಯಾನಗಳ ಬಾಗಿಲು ಕೂಡಾ ತೆರೆಯಲಾಗಿದ್ದು, ನಗರಪಾಲಿಕೆ, ಮುಡಾದಿಂದ ಅಳವಡಿಸಲಾಗಿದ್ದ ವ್ಯಾಯಾಮ ಉಪಕರಣಗಳಲ್ಲಿ ಜನರು ವ್ಯಾಯಾಮ ಮಾಡುವುದರಲ್ಲಿ ನಿರತರಾಗಿದ್ದರು. ಆದರೆ ಇಲ್ಲಿ ಬಹುತೇಕ ಜನರು ಮಾಸ್ಕ್ ಧರಿಸದೆ ವಾಯು ವಿಹಾರದಲ್ಲಿ ತೊಡಗಿದ್ದು ಕಂಡು ಬಂತು.

ಬಾಗಿಲು ತೆರೆದ ಸಲೂನ್‌ಗಳು: ಲಾಕ್‌ಡೌನ್ ಬಳಿಕ ಸಲೂನ್ ಶಾಪ್ ತೆರೆಯಲಾಗಿದ್ದು, ಹಲವು ಸಲೂನ್‌ಗಳು ಪ್ರಥಮ ದಿನವೇ ಬಿಡುವಿಲ್ಲದಂತೆ ಕಾರ್ಯ ನಿರ್ವಹಿಸಿದವು. ಸಲೂನ್‌ಗಳು ಬಾಗಿಲು ತೆರೆದಿರುವುದನ್ನು ಕಂಡ ಗ್ರಾಹಕರು ಮಳಿಗೆಗಳ ಮುಂದೆ ತಮ್ಮ ಸರದಿಗಾಗಿ ಕಾಯ್ದುಕುಳಿತಿದ್ದರು.

ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ಹೇರ್‌ಕಟ್ಟಿಂಗ್ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. ಅಲ್ಲದೆ ಗ್ರಾಹಕರನ್ನು ಮುಟ್ಟಿದ ನಂತರ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳದೆ ಜಾಗ್ರತೆಯಿಂದ ಕೆಲಸ ಮಾಡುತ್ತಿದ್ದರು. ಜತೆಗೆ ಸ್ಯಾನಿಟೈಸರ್ ಬಳಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು.