ಜಿಲ್ಲೆ

ಪೊಲೀಸ್ ಠಾಣೆಯಲ್ಲಿ ಸುಖಾಂತ್ಯ ಕಂಡ ಪಾಲಕರ ಪ್ರತಿಭಟನೆ

ಹೊಳೆನರಸೀಪುರ: ಪಟ್ಟಣದ ಐಚನಹಳ್ಳಿ ರಸ್ತೆಯಲ್ಲಿರುವ ಋಷಿಶ್ರೀ ವಿದ್ಯಾನಿಕೇತನ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳ ಪಾಲಕರು-ಆಡಳಿತ ಮಂಡಳಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಅಂತ್ಯ ಕಾಣದೆ ಮಂಗಳವಾರ ಪೊಲೀಸ್ ಠಾಣೆ ಮೆಟ್ಟಿಲೇರಿತು.


ಆಡಳಿತ ಮಂಡಳಿ ವಿರುದ್ಧ ಪಾಲಕರು ಸೋಮವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪಿಎಸ್‌ಐ ರಕ್ಷಿತಾ ಅವರು ಪ್ರತಿಭಟನಾಕಾರರಿಗೆ ಬುದ್ಧಿಮಾತು ಹೇಳಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ಹೋದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತ್ಯೇಕ ದೂರು ನೀಡುವಂತೆ ತಿಳಿಸಿದರಲ್ಲದೆ, ಪ್ರತಿಭಟನೆ ಕೈಬಿಡುವಂತೆಯೂ ಮನವೊಲಿಸಿದ್ದರು.


ಈ ಮಧ್ಯೆ ಆಡಳಿತ ಮಂಡಳಿ ಕಾರ್ಯದರ್ಶಿ ಸುರೇಶ್ ಅವರು ಮಾಹಿತಿ ನೀಡಿ ಮಂಗಳವಾರ ಶಾಲಾ ಆವರಣದಲ್ಲಿ ಪಾಲಕರ ತುರ್ತು ಸಭೆ ಏರ್ಪಡಿಸಿರುವುದಾಗಿ, ಪಾಲಕರು ಆಗಮಿಸಿ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು.


ಮಂಗಳವಾರ ಬೆಳಗ್ಗೆ ಶಾಲಾ ಆವರಣದಲಿ ಏರ್ಪಡಿಸಿದ್ದ ಸಭೆಯಲ್ಲಿ ನೂರಕ್ಕೂ ಹೆಚ್ಚು ಪಾಲಕರು ಪಾಲ್ಗೊಂಡು ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಸಭೆಯಲ್ಲಿ ಮಾತನಾಡಿದ ಕಾರ್ಯದರ್ಶಿ ಸುರೇಶ್, ಪ್ರಸ್ತುತ ನಮ್ಮ ಸಂಸ್ಥೆ ಆರ್ಥಿಕ ಸಮಸ್ಯೆ ಅನುಭವಿಸುತ್ತಿದೆ. ಇದೀಗ ಶಿಕ್ಷಕರಿಗೂ ಸಂಬಳ ನೀಡಲು ಸಂಕಷ್ಟವಾಗಿದೆ. ಆದ್ದರಿಂದ ಪಾಲಕರು ಶಾಲೆ ಸುಸೂತ್ರವಾಗಿ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.


ಪಾಲಕರ ಪರವಾಗಿ ವಕೀಲ ಪ್ರಶಾಂತ್ ಮಾತನಾಡಿ, ನೀವು ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳುವ ವೇಳೆ ನಮಗೆ ಕರಾರು ಪತ್ರ ಮಾಡಿಕೊಟ್ಟಿದ್ದು, ಅದರಂತೆ ನಡೆದುಕೊಳ್ಳಬೇಕು ಮತ್ತು ಆದರ್ಶ ಮತ್ತು ನವೋದಯ ಶಾಲೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಕರಾರಿನ ಪ್ರಕಾರ ಮುಂಗಡ ಹಣ ಒಂದು ಲಕ್ಷ ರೂ.ಗಳನ್ನು ಪಾಲಕರಿಗೆ ಮರು ಪಾವತಿ ಮಾಡಬೇಕೆಂದು ಒತ್ತಾಯಿಸಿದರು.


ಕಳೆದ ವರ್ಷ ಈ ಶಾಲೆಯಿಂದ ಕೆಲ ಮಕ್ಕಳು ವರ್ಗಾವಣೆ ಪತ್ರ ಪಡೆದು ಹೋಗಿದ್ದು, ಅವರ ಪಾಲಕರಿಗೆ ನೀಡಬೇಕಾದ ಮುಂಗಡ ಹಣಕ್ಕೆ ಶಾಲಾ ಆಡಳಿತ ಮಂಡಳಿ ಚೆಕ್ ನೀಡಿದೆ. ಆದರೆ ಆಡಳಿತ ಮಂಡಳಿ ನೀಡಿರುವ ಎರಡು ಚೆಕ್‌ಗಳು ಬೌನ್ಸ್ ಆಗಿವೆ ಎಂದು ಆರೋಪಿಸಿ ಬೌನ್ಸ್ ಆದ ಚೆಕ್‌ಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.


ಕಾರ್ಯದರ್ಶಿ ಸುರೇಶ್ ಮಾತನಾಡಿ, ನಾವು ಎರಡು ಚೆಕ್ ನೀಡಿರುವುದು ನಿಜ. ಆದರೆ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ನಮಗೆ ಹಣವನ್ನು ನೀಡಲಾಗಿಲ್ಲ ಎಂದು ತಿಳಿಸಿದರಲ್ಲದೆ, ಜುಲೈ ಅಂತ್ಯದೊಳಗೆ ಎಲ್ಲರಿಗೂ ಹಣ ಹಿಂತಿರುಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಕೀಲ ಪ್ರಶಾಂತ್ ಮಾತನಾಡಿ, ತಮಗೆ ಹಣ ವಾಪಸ್ ಬೇಡ, ನೀವು ಈ ಹಿಂದೆ ಕರಾರು ಪತ್ರದಲ್ಲಿ ತಿಳಿಸಿರುವಂತೆ ನಮ್ಮ ಮಕ್ಕಳಿಗೆ ಶಿಕ್ಷಣ ಮುಂದುವರಿಸಿ ಎಂದು ತಿಳಿಸಿದರು.


ಕಾರ್ಯದರ್ಶಿ ಸುರೇಶ್ ಪ್ರತಿಕ್ರಿಯಿಸಿ, ಈಗಾಗಲೆ ನಮ್ಮ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಆದ್ದರಿಂದ ನಮ್ಮ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸುವ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಇಂತಿಷ್ಟೆಂದು ಶುಲ್ಕ (35,000 ರೂ.) ನೀಡಿದ್ದಲ್ಲಿ ಮಕ್ಕಳಿಗೆ ಶಿಕ್ಷಣ ಮುಂದುವರಿಸುವುದಾಗಿ ತಿಳಿಸಿದ್ದರಿಂದ ಸಭೆ ಕೆಲ ಕಾಲ ಗೊಂದಲದ ಗೂಡಾಯಿತು.


ನಂತರ ಪಾಲಕರು ಗ್ರಾಮಾಂತರ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಠಿಕಾಣಿ ಹೂಡಿದರು. ವಿದ್ಯಾರ್ಥಿ ಪಾಲಕರು ತಮಗೆ ನ್ಯಾಯ ದೊರಕುವವರೆಗೂ ಹೊರ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.


ಇತ್ತ ಪೊಲೀಸರು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸುರೇಶ್ ಮತ್ತು ಅಧ್ಯಕ್ಷ ಜೀವನ್ ಅವರನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿದರು. ಶಾಲೆಯಿಂದ ವರ್ಗಾವಣೆ ಪತ್ರ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಮುಂಗಡವಾಗಿ ಪಡೆದಿರುವ ಒಂದು ಲಕ್ಷ ರೂ.ಗಳನ್ನು ಜುಲೈ ಅಂತ್ಯದೊಳಗೆ ನೀಡಬೇಕು ಹಾಗೂ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂದ ತಲಾ ಐದು ಸಾವಿರ ರೂ.ಪಡೆದು ಶಿಕ್ಷಣ ನೀಡುವಂತೆ ತೀರ್ಮಾನಿಸಲಾಯಿತು ಎಂದು ವಕೀಲ ವಸಂತ ಮಾಧ್ಯಮದವರಿಗೆ ಮಾಹಿತಿ ನೀಡಿದರು.