ಗದಗ: ಸಮ ಸಮಾಜ ನಿರ್ಮಾಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ತರವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಜೀವನದಲ್ಲಿ ಸಂತೋಷ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2 ರಿಂದ 4ರವರೆಗೆ ಏರ್ಪಡಿಸಿರುವ ಕರ್ನಾಟಕ ಸರ್ಕಾರದ 2ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಹಾಗೂ ಜನಪರ ಯೋಜನೆಗಳ ಮಾಹಿತಿಯನ್ನು ನೀಡುವ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು ಎಂದರು.
ಗೃಹ ಲಕ್ಷ್ಮೀ ಯೋಜನೆ ಮೂಲಕ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,46,039 ಫಲಾನುಭವಿಗಳ ಖಾತೆಗೆ 688.90 ಕೋಟಿ ರೂ. ಜಮೆಯಾಗಿದೆ. ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದಿಂದ ಪ್ರತಿ ಪಡಿತರದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಉಚಿತ ಬೆಳಕು ನೀಡಿ ಸುಸ್ಥಿರ ಬದುಕನ್ನು ನಡೆಸಲು ಸಹಕಾರಿಯಾಗಿದೆ. ಇಲ್ಲಿಯವರೆಗೆ 2,68,042 ಸ್ಥಾವರಗಳು ನೋಂದಣಿಯಾಗಿದ್ದು, ಉಚಿತ ವಿದ್ಯುತ್ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 10.81 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಅದಕ್ಕೆ ತಗುಲಿದ 353 ಕೋಟಿ ರೂ.ಗಳನ್ನು ಸರ್ಕಾರ ಭರಣ ಮಾಡಿದೆ ಎಂದರು.
ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯ ಕೃಷ್ಣಗೌಡ ಮಾತನಾಡಿ, ಸರ್ಕಾರದ 2 ವರ್ಷದ ಸಾಧನೆ ಆಚರಣೆ ರಾಜ್ಯಾದ್ಯಂತ ಸಂತೋಷದಿಂದ ಆಚರಿಸಲಾಗಿದೆ. ಪಂಚ ಗ್ಯಾರಂಟಿ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದರು.
ರೋಣ ತಾಲೂಕು ಅಧ್ಯಕ್ಷ ಮಿಥನಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಿ ರಾಜ್ಯವನ್ನು ಪ್ರಗತಿಯತ್ತ ಸಾಗಿಸುತ್ತಿದ್ದು , ಗ್ಯಾರಂಟಿಯಿಂದ ಬಡವರು, ಯುವಕರು ಹಾಗೂ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ಜಿಪಂ ಸಿಇಒ ಭರತ್ ಎಸ್., ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕಬರ್‌ಸಾಬ್ ಬಬರ್ಜಿ, ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಉಪಸ್ಥಿತರಿದ್ದರು.
ಸಿಎಂ ಜತೆ ಸೆಲ್ಫಿ
ವಸ್ತು ಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಯನ್ನೊಳಗೊಂಡ ಗ್ಯಾರಂಟಿಯ ಸಮರ್ಪಣೆ, ಅಭಿವೃದ್ಧಿಯ ಸಂಕಲ್ಪದ 2 ವರ್ಷಗಳ ಸಾಧನಾ ಸಂಭ್ರಮದ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಡೆದುಕೊಳ್ಳುವಂತೆ ಬಿಂಬಿಸುವ ಸೆಲ್ಫಿ ಸಾರ್ವಜನಿಕರ ಗಮನ ಸೆಳೆಯಿತು.