ಜಿಲ್ಲೆ

ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದ ಮಾಲೀಕ

ಗಂಗಾಧರ ಬಿ ವಿ

*ನಿಷೇಧಿತ ಪ್ಲಾಸ್ಟಿಕ್​ ಬಳಕೆ ಆರೋಪ

*ಕಾರ್ಯಾಚರಣೆಗೆ ತಡೆ

ಕನಕಪುರ

ನಗರದಲ್ಲಿ ಪ್ಲಾಸ್ಟಿಕ್​ ಬಳಕೆ ಹಾಗೂ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ವೇಳೆ, ಬೃಹತ್​ ಪ್ಲಾಸ್ಟಿಕ್​ ದಾಸ್ತಾನು ಮಾರಾಟಗಾರನೊಬ್ಬ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣ ಇತ್ತೀಚೆಗೆ ನಡೆದಿದೆ.

ಮುಸ್ಲಿಂ ಬ್ಲಾಕ್​ನ ಹಳೇ ಪೊಲೀಸ್​ ಸ್ಟೇಷನ್​ ರಸ್ತೆಯಲ್ಲಿನ ಎಸ್​ಎಲ್​ವಿ ಸ್ಟೋರ್​ ಮಾಲೀಕ ನಾಗರಾಜು ಎಂಬಾತನ ನಿಷೇಧಿತ ಪ್ಲಾಸ್ಟಿಕ್​ ದಾಸ್ತಾನು ಅಂಗಡಿಯ ಮೇಲೆ ಪ್ಲಾಸ್ಟಿಕ್​ ವಶಪಡಿಸಿಕೊಳ್ಳಲು ಮುಂದಾದ ನಗರಸಭೆಯ ಪೌರಾಯುಕ್ತ ಎಂ.ಎಸ್​.ಮಹದೇವ್​, ಅಧಿಕಾರಿಗಳ ಮತ್ತು ಸಿಬ್ಬಂದಿಯ ಕಾರ್ಯಚರಣೆಗೆ ಅಡ್ಡಿಪಡಿಸಿದ್ದಲ್ಲದೆ, ಅಧಕಾರಿಗಳೊಂದಿಗೆ ವಾಗ್ವಾದ ನಡೆಸಿ, ತನ್ನ ಅಂಗಡಿಯಲ್ಲಿರುವ ವಸ್ತುಗಳನ್ನು ಮುಟ್ಟದಂತೆ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಅಂಗಡಿಯ ಮಾಲೀಕ ನಾಗರಾಜು ಈ ರೀತಿ ನಿಮಗೆ ದಾಳಿ ಮಾಡಲು ಯಾರು ತಿಳಿಸಿದ್ದಾರೆ? ಕೋರ್ಟ್​ನಿಂದ ಅನುಮತಿ ಇದ್ದರೆ ತೋರಿಸಿ? ಇಲ್ಲದಿದ್ದರೆ ನಿಮ್ಮ ಮೇಲೆಯೇ ಪ್ರಕರಣ ದಾಖಲಿಸುತ್ತೇನೆ ಎಂದು ಕೂಗಾಡಿದ್ದಾನೆ. ಅಧಿಕಾರಿಗಳು ಈ ವೇಳೆ ಈತನ ಅಂಗಡಿ ಬಾಗಿಲು ಮುಚ್ಚಿಸಿ ಬೀಗ ಜಡಿದು ಹೋಗಿದ್ದಾರೆ. ಆದರೆ, ಮಾರನೇ ದಿನ ಬೆಳಗ್ಗೆ ಬೀಗ ಹೊಡೆದು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇಳೆ ಮತ್ತೆ ಅಧಿಕಾರಿಗಳೊಂದಿಗೆ ಖ್ಯಾತೆ ತೆಗೆದು ಗಲಾಟೆ ಮಾಡಿದ್ದಾನೆ.

ದಾಳಿಯ ವೇಳೆ ನಿಷೇಧಿತ ಪ್ಲಾಸ್ಟಿಕ್​ ವಸ್ತುಗಳು ಎನ್ನಲಾದ 220 ಕೆ.ಜಿ.ದಾಸ್ತಾನುಗಳನ್ನು ವಶಪಡಿಸಿಕೊಂಡು ಅಂಗಡಿ ನಡೆಸಲು ಉದ್ದಿಮೆ ಪರವಾನಿಗೆ ಪಡೆಯದೆ ಇರುವುದರಿಂದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ, 25 ಸಾವಿರ ದಂಡ ವಿಧಿಸುವಂತೆ ನೊಟೀಸ್​ ಜಾರಿ ಮಾಡಲಾಗಿದೆ.

ಪೌರಾಯುಕ್ತ ಎಂ.ಎಸ್​.ಮಹದೇವ್​ ಮಾತನಾಡಿ, ಮೂರು ದಿನಗಳಿಂದ ಪ್ಲಾಸಿಕ್​ ನಿಷೇಧದ ಕಾರ್ಯಾಚರಣೆ ನಡೆಸುತ್ತಿದ್ದರೂ, ಅಂಗಡಿ ಮಾಲೀಕರಿಂದ ಯಾವುದೇ ಸಹಕಾರ ಸಿಗದೆ, ಉದ್ದಟತನದಿಂದ ವರ್ತಿಸುತ್ತಿದ್ದಾರೆ. ನಿಷೇಧಿತ ಪ್ಲಾಸ್ಟಿಕ್​ ಬಳಕೆ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಜತೆಗೆ ನಗರತುಂಬೆಲ್ಲ, ಆವರಿಸಿಕೊಂಡು ಪರಿಸರಕ್ಕೆ ಮಾರಕವಾಗಿರುವುದರಿಂದ ಅದರ ಹಾವಳಿ ತಪ್ಪಿಸಲು ಪ್ರತಿಯೊಬ್ಬರ ಸಹಕಾರ ಬೇಕಾಗಿದೆ ಎಂದರು. ನಿಯಮ

ಪಾಲಿಸದೆ ಮಾರಾಟ ಮಾಡುವವರ ವಿರುದ್ಧ ಕೊನೆಗೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ನಗರಸಭಾ ಪರಿಸರ ಇಂಜಿನಿಯರ್​ ಟಿ.ಡಿ.ಧನಂಜಯ್ಯ, ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ್​ ಇದ್ದರು.