ಜಿಲ್ಲೆ

ವಚನ ಸಾಹಿತ್ಯದಲ್ಲಿ ಸಂವಿಧಾನದ ಮೂಲ ಆಶಯವಿದೆ: ಲೇಖಕ ಬನ್ನೂರು ಕೆ.ರಾಜು

ಮೈಸೂರು: ಭಾರತದ ಸಂವಿಧಾನದ ಮೂಲ ಆಶಯ ವಚನ ಸಾಹಿತ್ಯದಲ್ಲಿದೆ ಎಂದು ಲೇಖಕ ಬನ್ನೂರು ಕೆ.ರಾಜು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದಿಂದ ಕುವೆಂಪುನಗರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಚನ ಗಾಯನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿಗೆ ಮಾನವೀಯತೆಯ ಮೌಲ್ಯವನ್ನು ಬಿತ್ತಿದವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟದ್ದು ವಚನ ಸಾಹಿತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ಭಾರತದ್ದು ಎನ್ನುವ ವಿಶ್ಲೇಷಣೆ ಇದೆ. ಅಂತಹ ಸಂವಿಧಾನದ ಮೂಲ ಆಶಯಗಳು ವಚನ ಸಾಹಿತ್ಯದಲ್ಲಿ ಇವೆ. ಹಾಗಾಗಿ ಯಾರು ವಚನ ಸಾಹಿತ್ಯವನ್ನು ಪ್ರೀತಿಸುವರೋ ಅವರ ಬದುಕು ಉಜ್ವಲವಾಗಿ ಬೆಳೆಯುತ್ತದೆ ಎಂದು ಹೇಳಿದರು.

ನಾವು ಮನುಷ್ಯತ್ವವನ್ನು ಬೆಳೆಸಬೇಕು. ನಾಮೃತದ ದಾರಿ ಏರಿದವರು ಶರಣರು. ಶರಣರ ಸಾಹಿತ್ಯವನ್ನು ಓದಿದರೆ ಜಗತ್ತಿನ ಎಲ್ಲ ಸಾಹಿತ್ಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಓದಿದಂತೆ. ಒಳ್ಳೆಯದನ್ನು ಕೊಟ್ಟು ಖುಷಿಪಡಬೇಕು, ಕೆಟ್ಟದ್ದನ್ನು ಎಂದೂ ಅಂತರಂಗದಲ್ಲೂ ಬಯಸಬಾರದು. ಸಮಾಜಕ್ಕೆ ಒಳ್ಳೆಯದನ್ನು ಕೊಡದಿದ್ದರೆ ನಾವಿದ್ದು ಸತ್ತಂತೆ. ಜನಸಾಹಿತ್ಯ ಎಂಬುದು ಸರಳ ಸುಲಭ ಜನಸಾಮಾನ್ಯರಿಗೆ ತಲುಪುವ ಮುತ್ತುಗಳು. ಈ ಮುತ್ತುಗಳನ್ನು ಉಳಿಸಿಕೊಳ್ಳುವ ನಮ್ಮೊಳಗೆ ನಾವು ಆಚರಣೆಗೆ ತರುವ ಅಗತ್ಯತೆ ಎಲ್ಲರ ಮೇಲಿದೆ. ನಮ್ಮ ಸಮಾಜ ಸುಸ್ಥಿರವಾಗಿ ಉಳಿಯಬೇಕಾದರೆ ಶರಣರ ವಚನಗಳನ್ನು ಓದಬೇಕು. ಆಗ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು

ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ನಗರ ಘಟಕ ಅಧ್ಯಕ್ಷ ಮ.ಗು. ಸದಾನಂದಯ್ಯ ಮಾತನಾಡಿ, ಜೀವನ ಪಾಠ ಪಠ್ಯ ಪೂರಕವಾದ ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಬದುಕಿನ ಬೆಳಕಿಗೆ ವಚನಗಳು ದಾರಿದೀಪ. ಅಂತಹ ವಚನಗಳನ್ನು ಎಲ್ಲರಿಗೂ ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಗೋಕುಲ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ವಸಂತ ಕುಮಾರಿ, ಅವರು ಗಾಯನ ಪ್ರಸ್ತ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದವರು.

ಪರಿಷತ್ತಿನ ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ನೇತ್ರಾ, ಮಮತಾ, ಚನ್ನಬಸಪ್ಪ, ಮಂಜುಳಾ, ರವಿ, ರಮೇಶ್, ಶಿವನಂಜಪ್ಪ, ಭವ್ಯಾ, ಮುಖ್ಯಶಿಕ್ಷಕ ಜೆ.ಸುದೀಪ್‌ಕುಮಾರ್, ದತ್ತಿದಾನಿ ಶೈಲಾ ಸಿದ್ದರಾಮಯ್ಯ ಇತರರು ಇದ್ದರು.