ಗಜೇಂದ್ರಗಡ: ರಾಜ್ಯದ ವಿರಕ್ತಮಠಗಳು ಸಾಮಾಜಿಕ, ಶೈಕ್ಷಣಿಕ, ಧಾರ್ವಿುಕ ಕಾರ್ಯ ಮಾಡುತ್ತಿವೆ ಎಂದರೆ, ಅದಕ್ಕೆಲ್ಲ ಬಸವಾದಿ ಶಿವಶರಣರೇ ಪ್ರೇರಣೆ ಎಂದು ಹಾಲಕೆರೆ ಶ್ರೀ ಮುಪ್ಪಿನಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಹಾಲಕೆರೆ-ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಮಠದ ವತಿಯಿಂದ ಏರ್ಪಾಟಾದ ಬಸವ ಪುರಾಣದಲ್ಲಿ 25 ದಿನವಾದ ಗುರುವಾರ ಶೂನ್ಯ ಸಿಂಹಾಸನ ಪೀಠಾರೋಹಣ ಅಲಂಕರಿಸಿ ಆಶೀರ್ವಚನ ನೀಡಿದರು.
ಎಲ್ಲ ವಿರಕ್ತಮಠಗಳ ಮೂಲ ಪುರುಷ ಅಲ್ಲಮಪ್ರಭುಗಳು. ಜಗತ್ತಿನಲ್ಲಿ ನಾಶವಾಗದ ಅಕ್ಷರ ಸಂಸ್ಕೃತಿ ಕೊಟ್ಟಿರುವುದು ಬಸವಾದಿ ಶಿವಶರಣರು. ಬಸವಣ್ಣನವರ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳ ಚಿಂತನ-ಮಂಥನಗಳಿಂದ ಅಸ್ಪೃಶ್ಯತೆ ನಿವಾರಣೆ, ಮಹಿಳೆಯರಿಗೆ ಸ್ವಾತಂತ್ರ್ಯ ಶಿಕ್ಷಣ ದೊರೆಯುವಂತಾಯಿತು. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಕೈಗೊಂಡ ಅನೇಕ ಅವಿಸ್ಮರಣೀಯ ಕಾರ್ಯಗಳಿಂದ ಭಾರತ ಇಂದು ಜಗತ್ತಿನಲ್ಲಿ ಪ್ರಜ್ವಲಿಸುತ್ತಿದೆ ಎಂದರು.
ದಕ್ಷಿಣ ಭಾರತದಲ್ಲಿ ಸುಶಿಕ್ಷಣ, ಸಂಸ್ಕಾರ ಬಂದಿರುವುದು ಬಸವಣ್ಣ ಮತ್ತು ಅಲ್ಲಮರಿಂದ. ಬಸವನ್ಣನವರನ್ನು ಎಲ್ಲರಿಗೂ ಇಷ್ಟಲಿಂಗವನ್ನು ಕಟ್ಟಿ ಭಕ್ತ ಎಂಬ ಜಾತಿ ಸೃಷ್ಟಿಸಿದರು. ಸಕಲ ಜೀವರಾಶಿಗಳಿಗೆ ಲೇಸು ಬಯಸಿದ ವ್ಯಕ್ತಿತ್ವ ಬಸವಾದಿ ಶಿವಶರಣರದು. ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣದಿಂದ ಹಲವಾರು ಜನರು ವ್ಯಸನಗಳಿಂದ ದೂರವಾಗಿದ್ದಾರೆ ಎಂಬುದು ಬಹಳ ಸಂತೋಷವಾಗಿದೆ. ಪಟ್ಟಣದಲ್ಲಿ ಎಲ್ಲ ಜನರು ಭಾವ್ಯಕ್ಯದಿಂದ ಬಾಳುತ್ತಿದ್ದು, 12ನೇ ಶತಮಾನ ಪರಿಕಲ್ಪನೆ ಮರುಕಳಿಸಿದಂತಾಗಿದೆ ಎಂದರು.
ಇದಕ್ಕೂ ಮುನ್ನ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರ ಶೂನ್ಯ ಸಿಂಹಾಸನ ಪೀಠಾರೋಹಣ ವಿಜೃಂಭಣೆಯಿಂದ ನಡೆಯಿತು. ಎಲ್ಲ ಶರಣ-ಶರಣೆಯರು ಹೂವುಗಳನ್ನು ಸಮರ್ಪಿಸಲಾಯಿತು. 25ನೇ ದಿನ ಬಸವ ಪುರಾಣಕ್ಕೆ ಚೋಳಚಗುಡ್ಡ, ಪುರ್ತಗೇರಿ ಸೈನಿಕ ನಗರದ ನಿವಾಸಿಗಳು, ಗಜೇಂದ್ರಗಡದ ಶ್ರಮಜೀವಿಗಳ ಕಾಲನಿ, ಬಳೂಟಗಿ, ವದೇಗೋಳ, ಗುಳಗುಳಿ ಗ್ರಾಮದ ಭಕ್ತರು ಬಸವ ಬುತ್ತಿ ಸಮರ್ಪಣೆ ಮಾಡಿದರು.
ಪುರಸಭೆಯ 40ಕ್ಕೂ ಅಧಿಕ ಪೌರಕಾರ್ವಿುಕರನ್ನು ಸನ್ಮಾನಿಸಲಾಯಿತು. 10 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಗರಗನಾಗಲಾಪುರದ ಶ್ರೀ ನಿರಂಜನಪ್ರಭು ಸ್ವಾಮೀಜಿ, ದರೂರು ಸಂಗನಬಸವೇಶ್ವರ ಮಠದ ಶ್ರೀ ಕೊಟ್ಟೂರು ಸ್ವಾಮೀಜಿ, ಸೋಮಸಮುದ್ರದ ಶ್ರೀ ಸಿದ್ಧಲಿಂಗ ದೇಶಿಕರು, ಶ್ರೀಧರಗಡ್ಡೆಯ ಶ್ರೀ ಮರಿಕೊಟ್ಟೂರು ದೇಶಿಕರು, ಸಂಗನಾಳದ ಶ್ರೀ ವಿಶ್ವೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಗೂಡೂರಿನ ಅನ್ನದಾನೇಶ್ವರ ಶಾಸ್ತ್ರಿಗಳು, ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪುರಸಭೆ ಸದಸ್ಯರಾದ ಮುರ್ತಜಾ ಡಾಲಾಯತ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್ಲ, ಪ್ರಭು ಚವಡಿ, ಎ.ಪಿ. ಗಾಣಿಗೇರ, ಶರಣಪ್ಪ ಬೆಟಗೇರಿ, ಬಸವರಾಜ ಕೊಟಗಿ, ಡಾ.ಬಿ.ವಿ. ಕಂಬಳ್ಯಾಳ, ಅಪ್ಪು ಮತ್ತಿಕಟ್ಟಿ, ಪ್ರಭು ಹಿರೇಮಠ, ಶರಣಪ್ಪ ರೇವಡಿ, ಸಂಗಪ್ಪ ಕುಂಬಾರ, ಆನಂದ ಸಜ್ಜನರ, ಕಳಕಯ್ಯ ಸಾಲಿಮಠ, ಮಹೇಶ ಪಲ್ಲೆದ, ಅಮರಯ್ಯ ಗೌರಿಮಠ, ಬಸವರಾಜ ಚನ್ನಿ ಇತರರು ಇದ್ದರು.