ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಡಿಡಿಪಿಐ ಸಿ.ಚಲುವಯ್ಯ, ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ಚಿತ್ರನಟ ಪ್ರೇಮ್‌ಕುಮಾರ್ ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ಪಾಠ ಕಲಿಸಿದವರು ಕೊನೆವರೆಗೂ ಗುರುಗಳೇ

ಪಾಂಡವಪುರ: ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳ ನೀತಿ ಪಾಠ ಹೇಳಿಕೊಟ್ಟು ವಿದ್ಯಾರ್ಥಿಗಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ರೂಪಿಸುವಂತಹ ಗುರುಗಳು ತಾವು ಮಾತ್ರ ಕೊನೆಯವೆಗೂ ಗುರುಗಳಾಗಿಯೇ ಉಳಿದುಕೊಳ್ಳುತ್ತಾರೆ ಎಂದು ಚಿತ್ರನಟ ಪ್ರೇಮ್‌ಕುಮಾರ್ ಹೇಳಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ದತ್ತಿ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿ ಗುರುಗಳಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್‌ನಂತಹ ಹುದ್ದೆಗಳನ್ನು ಅಲಂಕರಿಸುತ್ತಾರೆ. ಕೆಲವರು ಉದ್ಯಮಿಗಳಾಗುತ್ತಾರೆ. ಆದರೆ, ವಿದ್ಯೆ ಕಲಿಸಿದ ಗುರುಗಳು ಮಾತ್ರ ಕೊನೆಯವರೆಗೂ ಗುರುಗಳಾಗಿಯೇ ಉಳಿದುಕೊಳ್ಳುತ್ತಾರೆ. ಗುರುಸ್ಥಾನ ಎನ್ನುವುದು ಬಹಳ ದೊಡ್ಡದು, ವಿದ್ಯೆ ಕಲಿತಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಗುರುಭಕ್ತಿ ರೂಢಿಸಿಕೊಳ್ಳಬೇಕು, ಪಾಲಕರು ತಮ್ಮ ಮಕ್ಕಳನ್ನು ದೇಶಕ್ಕೆ ಅನ್ನಕೊಡುವ ರೈತ, ದೇಶ ಕಾಯುವ ಸೈನಿಕನಾಗುವಂತೆ ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.

ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಗೆ ಅವಶ್ಯಕವಾಗಿರುವ ಉತ್ತಮ ವಾತಾವರಣ ನಿರ್ಮಾಣ ಇದೆ. ನಾನು ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹೋಗಿದ್ದೇನೆ. ಅದರಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ತುಂಬ ಚೆನ್ನಾಗಿವೆ. ನಾನು ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಬಂದಂತಹ ಸಂದರ್ಭದಲ್ಲಿ ನನಗೆ ಅಚ್ಚಕನ್ನಡದ ವಾತಾವರಣ ಕಂಡುಬಂತು. ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಶಿವರಾಜು ಅವರು ಮನಸ್ಸು ಮಾಡಿದ್ದರೆ ಅವರು ವಿದೇಶಿ ನೆಲದಲ್ಲಿ ದೊಡ್ಡ ಕಂಪನಿಗಳನ್ನು ಸ್ಥಾಪಿಸಿ ಅಲ್ಲಿಯೇ ನೆಲೆ ಕಂಡುಕೊಳ್ಳಬಹುದಿತ್ತು. ಆದರೆ, ಅವರು ತಮ್ಮ ತಂದೆ ಹುಟ್ಟಿ ಬೆಳೆದಂತಹ ಚಿನಕುರಳಿ ಗ್ರಾಮದಲ್ಲಿಯೇ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಸಿ.ಪಿ.ಶಿವರಾಜು ಅವರು ದೊಡ್ಡಗುಣ ಎಂದು ಬಣ್ಣಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡಿದರೆ. ಭವಿಷ್ಯದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ದ್ವಿತೀಯ ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ಯಶಸ್ಸು ಕಂಡುಕೊಂಡರೆ ಮುಂದೆ ಉತ್ತಮ ಭವಿಷ್ಯ ಸಿಗಲಿದೆ. ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಕಾರ್ಯದರ್ಶಿ ಸಿ.ಹರೀಶ್ ಹಾಗೂ ಉಪನ್ಯಾಸಕ ವರ್ಗದವರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಶ್ರಮಪಡುತ್ತಿದ್ದಾರೆ. ಅದರ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ಓದಿದ ಶಾಲೆಗೆ, ಜನ್ಮಕೊಟ್ಟ ಪಾಲಕರಿಗೆ ಹೆಸರು ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಡಿಡಿಪಿಐ ಸಿ.ಚಲುವಯ್ಯ ಮಾತನಾಡಿ, ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಹಲವು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಉತ್ತಮವಾದ ಸಂಸ್ಥೆಯನ್ನು ನಿರ್ಮಿಸಲು ಸಂಸ್ಥೆಯ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಓದಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ಕಾಲೇಜಿನ ವಿದ್ಯಾಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ಅಮೆರಿಕದ ವಕೀಲ ಅಮರನಾಥ್‌ಗೌಡ, ಉದ್ಯಮಿ ವಿಶ್ವಾಮಿತ್ರ, ಈ-ಸಂಜೆ ಪತ್ರಿಕೆ ಸಂಪಾದಕ ಎಂ.ನಾಗರಾಜು, ಶಾಂತಿನಿಕೇತನ ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಕಾರ್ಯದರ್ಶಿ ಸಿ.ಹರೀಶ್, ಪ್ರಾಂಶುಪಾಲ ಮಾರುತಿ, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಮುಖ್ಯಶಿಕ್ಷಕಿ ಮಾಚಮ್ಮ ಇತರರು ಇದ್ದರು.