ಜಿಲ್ಲೆ

ಜಾಗೃತಿ ಮೂಡಿಸುವುದು ’ಶಿಶು ಆರೈಕೆ ಸಪ್ತಾಹ’ದ ಉದ್ದೇಶ; ಡಾ.ಗೋಪಿನಾಥ್

ಮಡಿಕೇರಿ: ನವಜಾತ ಶಿಶುಗಳ ಜೀವ ರಕ್ಷಣೆ ಮತ್ತು ಬೆಳವಣಿಗೆ ಕುರಿತು ಜಾಗೃತಿ ಮೂಡಿಸುವುದು ನವಜಾತ ’ಶಿಶು ಆರೈಕೆ ಸಪ್ತಾಹ’ ಕಾರ್ಯಕ್ರಮದ ಉದ್ದೇಶವಾಗಿದೆ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬೋದಕ ಆಸ್ಪತ್ರೆ) ವತಿಯಿಂದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ’ನವಜಾತ ಶಿಶು ಆರೈಕೆ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಭಾರತದಲ್ಲಿ ಪ್ರತೀ ವರ್ಷ ನವೆಂಬರ್ ೧೫ ರಿಂದ ೨೧ ರವರೆಗೆ ನವಜಾತ ಶಿಶು ಆರೈಕೆ ಕುರಿತು ಸಾಪ್ತಾಹಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ನವಜಾತ ಶಿಶುಗಳ ಜೀವ ರಕ್ಷಣೆ ಮತ್ತು ಬೆಳವಣಿಗೆ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ಮಗುವಿನ ಜನನದಿಂದ ೨೮ ದಿನಗಳ ಪ್ರಾರಂಭದ ಈ ಅವಧಿಯಾಗಿದ್ದು ಬಾಲ್ಯಾವಸ್ಥೆಯಲ್ಲಿ ಕಂಡುಬರುವ ಆರೋಗ್ಯದ ತೊಂದರೆಗಳು, ಸಂಭವಿಸುವ ಮರಣಗಳ ಪ್ರಮಾಣಕ್ಕಿಂತ ನವಜಾತ ಅವಧಿಯಲ್ಲಿಯೇ ಶೇ.೭೦ ಕ್ಕಿಂತಲೂ ಹೆಚ್ಚು ಶಿಶು ಮರಣಗಳು ಸಂಭವಿಸುತ್ತಿದೆ. ಗರ್ಭಿಣಿಯರಿಗೆ ಅವಶ್ಯಕ ಆರೋಗ್ಯ ಸೇವೆಗಳು, ಪರೀಕ್ಷೆಗಳು ಸೇರಿದಂತೆಅವಶ್ಯಕ ಸೇವೆಗಳನ್ನು ಪೂರೈಸುವುದು. ಮಗುವಿನ ವಯೋಮಾನಕ್ಕೆ ಅನುಗುಣವಾಗಿ ಲಸಿಕೆಗಳನ್ನು ಪಡೆಯುವುದು. ಶಿಶುಗಳಲ್ಲಿ ಕಂಡುಬರುವ ನ್ಯೂನ್ಯತೆಗಳನ್ನು ಬೇಗನೆ ಪತ್ತೆ ಮತ್ತು ನಿರ್ವಹಣೆ ಮಾಡುವುದು. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಹಾಗೂ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.


ನವೆಂಬರ್ ಮಾಹೆಯಿಂದ ಫೆ೨೮ ರವರೆಗೆ ಸ್ಯಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿಗಳಿಂದ ೫ ವರ್ಷದೊಳಗಿನ ಮಕ್ಕಳು, ಗರ್ಬಿಣಿಯರುಗಳಿಗೆ ಮಾಹಿತಿ ನೀಡಿ ಕಾರಣ ಹುಡುಕಿ ತ್ವರಿತ ಪತ್ತೆ ಚಿಕಿತ್ಸೆ ನಿರ್ವಹಣೆಯಿಂದ ಜನ್ಮ ದೋಷಗಳು ಹಾಗೂ ಗಂಡಾಂತರಗಳ ನಿರ್ವಹಣೆ ಮತ್ತು ರಕ್ಷಣೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.


ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ಯಾವುದೇ ತುರ್ತು ಸಂದರ್ಭಗಳಲ್ಲಿಯೂ ಸ್ಪಂದಿಸಲು ಸಂಸ್ಥೆ ಸಿದ್ದ ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ಅಗತ್ಯ ಸೇವೆಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.


ಕೊ.ವೈ.ವಿ.ಸಂ. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮೊದಲು ೧೦ ಹಾಸಿಗೆಯುಳ್ಳ ನವಜಾತ ಶಿಶು ಆರೈಕೆ ಕೇಂದ್ರವಿದೆ. ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರ ೨೦ ಕೋಟಿಯಷ್ಟು ಬೆಲೆಬಾಳುವ ಉಪಕರಣಗಳ ನೆರವಿನೊಂದಿಗೆ ಈಗ ೧೭ ಹಾಸಿಗೆಯುಳ್ಳ ಎನ್.ಐ.ಸಿ.ಯು ಕರ್ತವ್ಯ ನಿರ್ವಹಿಸುತ್ತಿದೆ. ಕೇಂದ್ರಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ನೀಡಿರುವ ಶುಶ್ರೂಷಕ ಹಾಗೂ ಸಿಬ್ಬಂದಿಯವರ ನೆರವಿನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ. ತಿಂಗಳಿಗೆ ೧೦೦ ರಿಂದ ೧೫೦ ರವರೆಗೆ ನವಜಾತ ಶಿಶುಗಳ ಆರೈಕೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಕಾರ್ಯಕ್ರಮದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ, ಕಿರುನಾಟಕ, ಕವನ, ಕೊಳಲುವಾದನ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್, ಶುಶ್ರೂಷಣಾಧಿಕಾರಿ ವೀಣಾ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುಳಾ, ವೈದ್ಯಕೀಯ ವಿದ್ಯಾರ್ಥಿಗಳು, ಮಕ್ಕಳ ತಜ್ಞರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕು.ಕ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು, ತಾಯಂದಿರು, ಪಾಲಕರು ಹಾಜರಿದ್ದರು.