ಮೈಸೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಿತರಾದವರು ಸರ್ಕಾರಿ, ದೊಡ್ಡ ಕಂಪನಿಗಳಉದ್ಯೊಗ ಬಯಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯುವಕರ ಸಂಖ್ಯೆ ಕಡಿಮೆ ಅಗಿದೆ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ಡೆವಲಪ್‌ಮೆಂಟ್ ಆರ್ಗನೈಜೇಷನ ಹಾಗೂ ಮೈಕ್ರೋಬಿ ಫೌಂಡೇಷನ್ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಸುಗ್ಗಿ ಸಂಭ್ರಮ, ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಿತರಾದವರು ಸರ್ಕಾರಿ ಉದ್ಯೊಗ ಬಯಸುವುದು ಸಹಜ. ಕೃಷಿ ಕ್ಷೇತ್ರದವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ಪದವೀಧರರು ಸೇರಿಕೊಂಡು ರೈತರನ್ನು ಗೌರವಿಸುತ್ತಿರುವುದು ಒಳ್ಳೆಯ ಕೆಲಸ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸರ್ಕಾರಿ ಉದ್ಯೋಗ, ಇಲ್ಲವೇ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಬಯಸುತ್ತಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ ಮಾತನಾಡಿ, ಎಲ್ಲ ಕ್ಷೇತ್ರಗಳನ್ನು ಅಕ್ರಮಿಸಿಕೊಂಡಿರುವ ಬಂಡವಾಳ ಶಾಹಿಗಳು ಹಣಗಳಿಸುವ ಉದ್ದೇಶದಿಂದ ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದ್ದಾರೆ. ಬಂಡವಾಳ ಶಾಹಿಗಳು ಈ ಕ್ಷೇತ್ರದಲ್ಲಿ ಕಾಲಿಟ್ಟರೆ ಗುಣಮಟ್ಟದ ಆಹಾರ ಕೈಗೆಟಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನೇಗಿಲಿರುವವರೆಗೂ ದೇಶ ಸುಸ್ಥಿರವಾಗಿರಲಿದೆ, ಇಲ್ಲವಾದರೆ ಅಸ್ಥಿರವಾಗಲಿದೆ. ವಿದ್ಯಾವಂತರು ಕೃಷಿ ಕ್ಷೇತ್ರದಿಂದ ದೂರವಾಗುತ್ತಿದ್ದಾರೆ. ಹೀಗಾಗಿ ಅವರನ್ನು ಕೃಷಿಯತ್ತ ಸೆಳೆಯುವ ಮತ್ತು ಶಾಲಾ-ಮಕ್ಕಳಿಗೆ ಕೃಷಿ ಚಟುವಟಿಕೆಗಳ ಕುರಿತು ಮನವರಿಕೆ ಮಾಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಟಿ.ಪಿ.ಹೊಂಬೇಗೌಡ ಅವರಿಗೆ ಕೃಷಿ ದ್ರೋಣಚಾರ್ಯ ಪ್ರಶಸ್ತಿ, ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿಯ ಪುಟ್ಟಸ್ವಾಮಿಗೌಡ ಹಾಗೂ ದೇವಿರಮ್ಮ ದಂಪತಿಗೆ ಕೃಷಿ ಭೀಷ್ಮಾಚಾರ್ಯ ಮತ್ತು ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಅಭಿಲಾಷ್ ಅವರಿಗೆ ಕೃಷಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 21 ಸಾಧಕ ಕೃಷಿಕರಿಗೆ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಶಾಸಕ ಮನೋಹರ್ ಮಸ್ಕಿ, ಶಾಸಕ ಟಿ.ಎಸ್. ಶ್ರೀವತ್ಸ , ಸಾವಯವ ತಜ್ಞ ಡಾ.ಕೆ.ಆರ್.ಹುಲ್ಲು ನಾಚೇಗೌಡ, ಮೈಸೂರು ಅಂಬಾರಿ ಸಂಸ್ಥೆ ಮುಖ್ಯಸ್ಥ ಸತ್ಯಶ್ರೀ ಬಿ.ಶ್ಯಾಮ್, ಧನ್ಯಶ್ರೀ ಡೆವಲಪರ್ಸ್‌ನ ಸಿ.ಶಂಕರ, ಜೆಎಸ್‌ಎಸ್‌ಎಸ್‌ಟಿಯುನ ಅಸೋಸಿಯೇಟ್ ಡೀನ್ ಡಾ. ರತ್ನಾಕರ್ ದೇವರು ಇದ್ದರು.