ಹಾಸನ: ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆಯ ದರ್ಶನ ಪಡೆದರು.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ಭಕ್ತರ ಸಂಖ್ಯೆ ಹೆಚ್ಚಾಯಿತು. ಶನಿವಾರ ರಾತ್ರಿ ಜಿಗ್‌ಜಾಗ್ ಮಾದರಿಯ 5 ಕಿಲೋ ಮೀಟರ್ ಬ್ಯಾರಿಕೇಡ್ ಮೀರಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿವರೆಗೆ ಸರತಿ ಸಾಲು ಇತ್ತು. ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಭಕ್ತರ ಸಂಖ್ಯೆ ಹೆಚ್ಚಾದರೂ ಸಮಯ ಕಳೆಯುತ್ತಿದ್ದಂತೆ ಸರಾಗ ದರ್ಶನವಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿ ಭಕ್ತರ ಸುಗಮ ದರ್ಶನಕ್ಕಾಗಿ ಸೇವೆ ಸಲ್ಲಿಸಿದರು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಡಚಣೆಯಿಲ್ಲದೆ ದರ್ಶನವಾಯಿತು.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಕೆಲಸ ನಿರ್ವಹಿಸುವವರು ಸ್ನೇಹಿತರು, ಕುಟುಂಬ ಸಮೇತರಾಗಿ ದೇವಾಲಯಕ್ಕೆ ಬಂದು ದರ್ಶನ ಪಡೆದರು.
ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಎರಡನೇ ದಿನಕ್ಕೆ 2.24 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ 300 ರೂ.ವಿಶೇಷ ದರ್ಶನದಲ್ಲಿ ಒಟ್ಟು 27,759 ಟಿಕೆಟ್‌ಗಳು. 1000 ರೂ.ವಿಶೇಷ ದರ್ಶನದಲ್ಲಿ 12,396 ಮಾರಾಟವಾಗಿದ್ದು, ಲಾಡು ಪ್ರಸಾದ 17,337 ಮಾರಾಟವಾಗಿದೆ. ಒಟ್ಟು ಸೇರಿ 2,24,57,400 ರೂ.ಆದಾಯ ಸಂಗ್ರಹವಾಗಿದೆ.
ದೇವರು ಬಂದಂತೆ ವರ್ತಿಸಿದ ಮಹಿಳೆ:
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ಧರ್ಮದರ್ಶನದ ಸಾಲಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಘಟನೆ ನಡೆಯಿತು.
ದರ್ಶನದ ಸಾಲಿನಲ್ಲಿ ನಿಂತಿದ್ದಾಗಲೇ ಮಹಿಳೆ ತಲೆ ಎತ್ತಿಕೊಂಡು ಕಿರುಚಾಡಲು ಆರಂಭಿಸಿದರು. ನಾನು ದೇವಿ ಬಂದಿದ್ದೀನಿ, ಇಲ್ಲಿ ಹೋಗಲು ಆಗುತ್ತಿಲ್ಲ. ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಾನು ಬೇರೆ ದಾರಿಯಿಂದ ಹೋಗಬೇಕು ಎಂದು ಕೂಗಿದರು. ಸ್ಥಳದಲ್ಲಿದ್ದ ಕೆಲವು ಯುವಕರು ಈ ದೃಶ್ಯ ನೋಡಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು. ಮಹಿಳೆಯನ್ನು ಸಮಾಧಾನಪಡಿಸಲು ಸುತ್ತಲಿದ್ದವರು ಪ್ರಯತ್ನಿಸಿದರು. ಮುಖಕ್ಕೆ ನೀರು ಚಿಮುಕಿಸಿದರೂ ಮಹಿಳೆ ಸಮಾಧಾನಗೊಳ್ಳದೆ ನೆಲದಲ್ಲೇ ಕುಳಿತು ತಲೆ ಒದರುತ್ತಾ ಮಾತನಾಡುತ್ತಿದ್ದರು. ಪೊಲೀಸರು ಧರ್ಮದರ್ಶನದ ಸಾಲಿನಲ್ಲೇ ಮಹಿಳೆಯನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸಿ ವಿಶ್ರಾಂತಿ ಕೊಠಡಿಗೆ ಕರೆದೊಯ್ದರು.