ಗುಂಡ್ಲುಪೇಟೆ ಹೊರವಲಯದಲ್ಲಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವುದು. 
ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿದೆ ಅಪಘಾತಗಳ ಸಂಖ್ಯೆ

ಗುಂಡ್ಲುಪೇಟೆ: ತಾಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ.

2016 ರಲ್ಲಿ ತಾಲೂಕಿನ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಯಿತು. ತಾಲೂಕಿನ ಹಿರೀಕಾಟಿಯಿಂದ ಮದ್ದೂರುವರೆಗೆ, ಕೇರಳದ ಸುಲ್ತಾನ್‌ಬತ್ತೇರಿ ರಸ್ತೆಯಿಂದ ಮೇಲುಕಾಮನಹಳ್ಳಿವರೆಗೆ ಊಟಿ ರಸ್ತೆಯನ್ನು ಹೆದ್ದಾರಿಯನ್ನಾಗಿ ಉನ್ನತೀಕರಿಸಲಾಯಿತು. ಈ ಸಂದರ್ಭದಲ್ಲಿ ರಸ್ತೆಗಳನ್ನು ವಿಸ್ತರಣೆ ಮಾಡಲಾಯಿತಾದರೂ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ.

ಗ್ರಾಮ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ವಿಭಜಕ, ಬೈಪಾಸ್ ರಸ್ತೆ, ಬೀದಿದೀಪ, ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ನಿರ್ಮಾಣ ಮಾಡದ ಪರಿಣಾಮ ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಅಪಘಾತ ವಲಯಗಳನ್ನು ಗುರುತಿಸಿ ವಾಹನ ಚಾಲಕರ ಗಮನಕ್ಕೆ ಬರುವಂತೆ ಸೂಚನಾ ಫಲಕಗಳನ್ನು ಅಳವಡಿಸದ ಕಾರಣದಿಂದ ಪ್ರತಿ ದಿನವೂ ಒಂದಲ್ಲ ಒಂದುಕಡೆ ಅಪಘಾತ ಸಂಭವಿಸಿ ಜನರು ಮೃತಪಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃದಿಂದ ರಾಷ್ಟ್ರೀಯ ಹೆದ್ದಾರಿಗಳು ಸಾವಿನ ಮನೆಯ ರಹದಾರಿಯಾಗುತ್ತಿವೆ ಎಂಬ ಆತಂಕ ವಾಹನ ಸವಾರರನ್ನು ಕಾಡುತ್ತಿದೆ.

ಅತಿವೇಗವೂ ಕಾರಣ: ತಾಲೂಕಿನ ಹಿರೀಕಾಟಿಯಿಂದ ಕೇರಳದ ಸುಲ್ತಾನ್‌ಬತ್ತೇರಿ ರಸ್ತೆ, ತಮಿಳುನಾಡಿಗೆ ಸಂಪರ್ಕಿಸುವ ಊಟಿ ರಸ್ತೆಯಲ್ಲಿ ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳ ಸಂಚಾರವಿದೆ. ಇತ್ತೀಚೆಗೆ ಕಲ್ಲು ಸಾಗಣೆ ಮಾಡುವ ಟಿಪ್ಪರ್‌ಗಳ ಸಂಚಾರವೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಬಂಡೀಪುರ ಅರಣ್ಯ ಪ್ರದೇಶಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ವೇಗವಾಗಿ ಸಾಗುವ ವಾಹನಗಳಿಂದ ವನ್ಯಜೀವಿಗಳು ಮೃತಪಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆದರೆ ಚೆಕ್‌ಪೋಸ್ಟ್ ದಾಟುವ ಧಾವಂತದಲ್ಲಿ ವೇಗವಾಗಿ ಸಾಗುವ ಅಂತಾರಾಜ್ಯ ವಾಹನಗಳಿಂದ ಹೆದ್ದಾರಿಗಳಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಅಪಘಾತ ಸಂಭವಿಸುತ್ತಲೇ ಇದ್ದು, ಪ್ರತಿ ವರ್ಷವೂ ಇವುಗಳ ಸಂಖ್ಯೆ ಏರುತ್ತಲೇ ಇದೆ.

ಬ್ಲಾೃಕ್ ಸ್ಪಾಟ್‌ಗಳು: ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡ್ರಹಳ್ಳಿಯಿಂದ ಸಮೀಪದ ಪೆಟ್ರೋಲ್ ಬಂಕ್, ವೀರನಪುರ ಕ್ರಾಸ್‌ನಿಂದ ಮಿಸ್ಟಿರಾಕ್ ಹೋಟೆಲ್, ಎಪಿಎಂಸಿ ಮಾರುಕಟ್ಟೆಯಿಂದ ವೆಂಕಟೇಶ್ವರ ಕಲ್ಯಾಣ ಮಂಟಪ, ಊಟಿ ರಸ್ತೆಯ ಬಸವಾಪುರ ಗೇಟ್ ಹಂಗಳ ನಡುವೆ ಅತಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದರಿಂದ ಈ ಸ್ಥಳಗಳನ್ನು ಬ್ಲಾೃಕ್‌ಸ್ಪಾಟ್ ಎಂದು ಗುರುತಿಸಲಾಗಿದೆ.

2022ರಲ್ಲಿ 84, 2023ರಲ್ಲಿ 101 ಅಪಘಾತಗಳು ಸಂಭವಿಸಿದ್ದರೆ, ಈ ವರ್ಷ ಜನವರಿಯಿಂದ ಜುಲೈ ಅಂತ್ಯದವರೆಗೆ ಈಗಾಗಲೇ 51 ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 19 ಪ್ರಕರಣ ಮಾನವರು ಮೃತಪಟ್ಟಿದ್ದರೆ ಉಳಿದ 32ರಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಕೈಕಾಲು ಮುರಿದುಕೊಂಡು ಅಂಗವಿಕಲತೆಗೊಳಗಾಗಿದ್ದಾರೆ.

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೀಕಾಟಿಯಿಂದ ಬೆಂಡಗಳ್ಳಿ ಗೇಟ್‌ವರೆಗೆ ಮೂರು ಬ್ಲಾೃಕ್‌ಸ್ಪಾಟ್‌ಗಳಿವೆ. ಹಿರೀಕಾಟಿ ಗೇಟ್, ಬೇಗೂರು ಬಸ್ ನಿಲ್ದಾಣದಿಂದ ಐಟಿಐ ಕಾಲೇಜು, ಗರಗನಹಳ್ಳಿ ಗೇಟ್‌ನಿಂದ ಅಗತಗೌಡನಹಳ್ಳಿ ಗೇಟ್, ಜನವರಿಯಿಂದ ಜೂನ್‌ವರೆಗೆ 44 ಪ್ರಕರಣ ಸಂಭವಿಸಿವೆ. 12 ಪ್ರಕರಣಗಳಲ್ಲಿ 15 ಜನರು ಸ್ಥಳದಲ್ಲಿಯೇ ಮೃತಪಟ್ಟರೆ, 32 ಪ್ರಕರಣದಲ್ಲಿ ಹಲವರು ಕೈಕಾಲು ಮುರಿದುಕೊಂಡಿದ್ದಾರೆ.

ರಾತ್ರಿ ವೇಳೆ ಹೆಚ್ಚು: ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸಲಾಗಿದೆ. ಅವುಗಳಿಗೆ ಹೋಗುವ ವಾಹನಗಳಿಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸಿದ್ದರೂ ಇವುಗಳ ಬಳಿ ಸೂಚನಾಫಲಕ, ರಿಫ್ಲೆಕ್ಟರ್ ಅಳವಡಿಸದ ಪರಿಣಾಮ ರಾತ್ರಿ ವೇಳೆ ವೇಗವಾಗಿ ಸಾಗುವ ವಾಹನಗಳು ಮುಖಾಮುಖಿ ಡಿಕ್ಕಿಯಾಗುತ್ತಿವೆ. ಜು.20ರಂದು ಪಟ್ಟಣದ ಮಿಸ್ಟಿರಾಕ್ ಹೋಟೆಲ್ ಎದುರು ಸಾರಿಗೆ ಬಸ್ ಡಿಕಿ ್ಕಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದನ್ನು ಸ್ಮರಿಸಬಹುದು.

ಬಿಡಾಡಿ ದನಗಳ ಹಾವಳಿ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ನುಗ್ಗುವ ದನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾಗಳಾಗುತ್ತಿವೆ. ಪುರಸಭೆ, ತಾಲೂಕು ಕಚೇರಿ, ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಸಂಚಾರ ದಟ್ಟಣೆ ಹೆಚ್ಚಾಗಿರುವ ರಸ್ತೆಗಳ ನಡುವೆ ಮಲಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿವೆ. ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳು ರಸ್ತೆ ನಡುವೆ ಮಲಗುವ ದನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿ ಸಾಗುವ ಪಾದಚಾರಿಗಳು ಇಲ್ಲವೇ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ.

ಪೊಲೀಸರಿಂದ ಕ್ರಮ: ಹೆಚ್ಚಾಗಿ ಅಪಘಾತ ಸಂಭವಿಸುವ ಪ್ರದೇಶಗಳಲ್ಲಿ ಬೇಗೂರು ಠಾಣೆ ಪೊಲೀಸರು ಸಿಬ್ಬಂದಿ ನಿಯೋಜನೆ ಮಾಡುತ್ತಿದ್ದಾರೆ. ಅತಿವೇಗದ ವಾಹನಗಳಿಗೆ ದಂಡ ವಿಧಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ 662 ವಾಹನಗಳಿಗೆ ದಂಡ ವಿಧಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಅರಿವು ಮೂಡಿಸುತ್ತಿದ್ದಾರೆ.

ಪದೇ ಪದೆ ಅಪಘಾತಗಳು ಸಂಭವಿಸುವ ಬ್ಲಾೃಕ್‌ಸ್ಪಾಟ್‌ಗಳನ್ನು ಪೊಲೀಸರು ಗುರುತಿಸಿ ತಮ್ಮ ಮಟ್ಟದಲ್ಲಿ ಅಪಘಾತ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷ್ಯ ಪ್ರದರ್ಶಿಸುತ್ತಿದೆ.
ಬಸವಣ್ಣ ವೀರನಪುರ ಗ್ರಾಮಸ್ಥ

ನಮ್ಮ ಹಾಗೂ ಬೇಗೂರು ಠಾಣೆ ವ್ಯಾಪ್ತಿಯಲ್ಲಿರುವ ಅಪಘಾತ ವಲಯಗಳನ್ನು ಬ್ಲಾೃಕ್ ಸ್ಪಾಟ್ ಎಂದು ಗುರುತಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಅಪಘಾತ ವಲಯಗಳ ಬಗ್ಗೆ ಎಚ್ಚರಿಕೆ ನೀಡುವ ಸೂಚನಾಫಲಕ ಹಾಗೂ ಪ್ರತಿಫಲಕಗಳನ್ನು ಅಳವಡಿಕೆ ಮಾಡಲು ಕ್ರಮಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕಳೆದ ವಾರ ಜಿಲ್ಲಾಧಿಕಾರಿ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಪರಶಿವಮೂರ್ತಿ ಸರ್ಕಲ್ ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ ಠಾಣೆ