ಮಡಿಕೇರಿ: ತಾಳೆ ಗರಿಯಲ್ಲಿದ್ದ ವಚನಗಳನ್ನು ಮನೆ ಮನೆಗಳಿಗೆ ತೆರಳಿ ಸಂಗ್ರಹಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಡಾ.ಫ.ಗು.ಹಳಕಟ್ಟಿರವರ ಕಾರ್ಯಕ್ಕೆ ಸಮಸ್ತ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡ್ಲಿಪೇಟೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನದ ಪ್ರಯುಕ್ತ ’ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಳೆಗರಿಯಲ್ಲಿ ದಾಖಲಾಗಿದ್ದ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ ಅಮೂಲ್ಯ ವಚನ ಭಂಡಾರವನ್ನು ಕನ್ನಡ ನಾಡಿಗೆ ನೀಡಿದ್ದಾರೆ. ವಚನ ಸಾಹಿತ್ಯದ ಆಶಯಗಳನ್ನು ಮಕ್ಕಳು ಅಧ್ಯಯನ ಮಾಡಬೇಕು. ಹೊಸ ಪೀಳಿಗೆಯು ವಚನ ಸಾಹಿತ್ಯದ ಮಹತ್ವವನ್ನು ತಿಳಿಯಬೇಕು ಎಂದರು.
ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ನಿರಂಜನ್ ಮಾತನಾಡಿ, ಡಾ.ಫ.ಗು.ಹಳಕಟ್ಟಿರವರು ಕನ್ನಡನಾಡು ಹಾಗೂ ಜಗತ್ತಿಗೆ ಅಮೂಲ್ಯವಾದ ವಚನ ಸಾಹಿತ್ಯವನ್ನು ಬೆಳಕಿಗೆ ತಂದರು. ಹಳಕಟ್ಟಿ ಅವರು ಶ್ರಮಿಸದೇ ಹೋಗಿದ್ದರೆ ಕನ್ನಡ ನಾಡು ಹಾಗೂ ಜಗತ್ತಿಗೆ ಅಮೂಲ್ಯವಾದ ವಚನ ಸಾಹಿತ್ಯವು ಈಗಿನ ಮುದ್ರಿತ ರೂಪದಲ್ಲಿ ಸಿಗುತ್ತಿರಲಿಲ್ಲ ಎಂದು ವಿವರಿಸಿದರು.
ವಚನ ಸಾಹಿತ್ಯವು ರಾಷ್ಟ್ರದ ೩೦ ಭಾಷೆಗಳಿಗೆ ಅನುವಾದಗೊಂಡಿದೆ. ಹಳಕಟ್ಟಿಯವರ ಕಾರ್ಯವೇ ಇದಕ್ಕೆಲ್ಲಾ ಆಧಾರವಾಗಿದೆ. ಜಗತ್ತಿನ ಎಲ್ಲಾ ಜನರ ಜೀವಿಗಳ ಕಲ್ಯಾಣದ ಆಶಯ ವಚನ ಸಾಹಿತ್ಯದಲ್ಲಿದೆ. ಬ್ರಿಟೀಷ್ ಸಂಸತ್‌ನಲ್ಲಿ ೧೨೧೫ ರ ಮ್ಯಾಗ್ನಾಕಾರ್ಟ್ ಆಧರಿಸಿ ಅಸ್ತಿತ್ವಕ್ಕೆ ಬಂದಿದೆ. ಅದಕ್ಕಿಂತಲೂ ೭೫ ವರ್ಷಗಳ ಮುಂಚಿತವಾಗಿ ಕರ್ನಾಟಕದ ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬಂದಿತು ಎಂದು ಎಂ.ಆರ್.ನಿರಂಜನ್ ಹೇಳಿದರು.
ಕಾರ್ಯಕ್ರಮವನ್ನು ಪ್ರಥಮ ದರ್ಜೆ ಕಾಲೇಜಿನ ಸಂಸ್ಥೆಯ ಉಪಾಧ್ಯಕ್ಷ ಶಂಭುಲಿಂಗಪ್ಪ ಉದ್ಘಾಟಿಸಿದರು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕ ಯತೀಶ್ ವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಮೈಸೂರಿನ ಪುರುಷೋತ್ತಮ ಮತ್ತು ತಂಡದವರು ವಚನ ಗೀತಾ ಗಾಯನವನ್ನು ನಡೆಸಿಕೊಟ್ಟರು. ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಬು, ಉಪನ್ಯಾಸಕರಾದ ಅಭಿಲಾಷ್, ಶಶಿಕಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ, ಇತರರು ಇದ್ದರು.