ಮೈಸೂರು: ಸೈಬರ್ ಅಪರಾಧಗಳ ಕುರಿತು ನಿತ್ಯ ಪ್ರಕರಣಗಳು ದಾಖಲಾಗುತ್ತಲೇ ಇದ್ದರೂ ವಂಚಕರ ಜಾಲಕ್ಕೆ ಜನ ಬೀಳುತ್ತಲೇ ಇರುವುದು ವಿಷಾದನೀಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಿ.ಎಸ್.ಪ್ರತಿಮಾ ತಿಳಿಸಿದರು.
ನಗರದ ಮಹಾರಾಣಿ ಕಲಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಇ) ಸಹಯೋಗದಲ್ಲಿ ಆಯೋಜಿಸಿದ್ದ ಸೈಬರ್ ಭದ್ರತೆಯ ಕುರಿತು ಸಾಮಾಜಿಕ ಜಾಗೃತಿ ವಿಷಯದ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸೈಬರ್ ಅಪರಾಧಗಳ ಕುರಿತು ನಿತ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದನ್ನು ಗಮನಿಸಿದ ಬಳಿಕವೂ ಅನೇಕರು ವಂಚನೆಯ ಜಾಲಕ್ಕೆ ಮತ್ತೆ ಮತ್ತೆ ಬೀಳುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ಸೈಬರ್ ಅಪರಾಧಗಳಿಗೆ ವಿದ್ಯಾವಂತ ಯುವ ಜನರು ಸಿಲುಕುತ್ತಿದ್ದಾರೆ. ನಕಲಿ ಖಾತೆಗಳ ಹಾವಳಿಯು ಸರ್ಕಾರಿ ಸಂಸ್ಥೆಗಳನ್ನೂ ಬಿಟ್ಟಿಲ್ಲ, ಈಚೆಗೆ ಸರ್ಕಾರಿ ಕಾಲೇಜಿನ ಖಾತೆಯಿಂದ ವಂಚಕರು ಹಣ ಡ್ರಾ ಮಾಡಿಕೊಂಡಿದ್ದರು. ಇದರಿಂದ ತಪ್ಪಿಲ್ಲದಿದ್ದರೂ, ಆಡಳಿತ ಮಂಡಳಿ, ಪ್ರಾಂಶುಪಾಲರು ಅವಮಾನ ಅನುಭವಿಸಿದರು ಎಂದರು.
ತಂತ್ರಜ್ಞಾನವು ಹೊಸ ಆಲೋಚನೆಯ ಜತೆಗೆ ಭಯದ ವಾತಾವರಣವನ್ನೂ ನಿರ್ಮಿಸುತ್ತಿದ್ದು, ವಂಚನೆಯ ಜಾಲಗಳ ಬಗ್ಗೆ ಎಚ್ಚರವಹಿಸಬೇಕು. ಹೀಗಾಗಿ ಸೈಬರ್ ಭದ್ರತೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ ಎಂದು ಹೇಳಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಂ.ಅನಿಲ್ ಕುಮಾರ್ ಮಾತನಾಡಿ, ವಂಚಕರು ನಿವೃತ್ತರನ್ನು ಗುರಿಯಾಗಿಸಿ ಕೆಲಸ ಮಾಡುತ್ತಿದ್ದಾರೆ. ವ್ಯಾಪಾರದ ಆಸೆಗೆ ಬಿದ್ದು ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ಸೈಬರ್ ಅಪರಾಧಗಳು ವಿಭಿನ್ನ ರೂಪ ತಾಳುತ್ತಿವೆ. ಹೀಗಾಗಿ ನಾವು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿರಬೇಕು ಎಂದು ತಿಳಿಸಿದರು.
ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲೆ ಎಂ.ಎಸ್.ಅನಿತಾ, ಎನ್‌ಐಇ ಕಾಲೇಜಿನ ಡೀನ್ ಡಾ.ಸಿ ವಿದ್ಯಾರಾಜ್, ವಿವಿಧ ವಿಭಾಗದ ಕೆ.ವೆಂಕಟೇಶ್, ಡಾ.ಬಿ.ಎಂ.ನಂದಿನಿ, ಡಾ.ಬಿ.ಎಸ್.ಶರ್ಮಿಳಾ, ಡಾ. ಎಸ್.ಎಸ್. ಕವಿತಾ ಇದ್ದರು.