ಹೊಳೆಹೊನ್ನೂರು: ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಟಿಎಚ್‌ಒ ಡಾ. ಎಂ.ಬಿ.ಅಶೋಕ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಯುವ ರೆಡ್‌ಕ್ರಾಸ್ ರೋವರ್ಸ್ ರೇಂಜರ್ಸ್ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಹೃದಯ ದಿನ ಹಾಗೂ ರೇಬಿಸ್‌ನಿಂದ ದೂರವಿರಲು ಮುಂಜಾಗ್ರತವಾಗಿ ವಹಿಸುವ ಕ್ರಮಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತದೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಜಾಗೃತರಾಗಬೇಕು. ದಿನದಿಂದ ದಿನಕ್ಕೆ ಕಾಯಿಲೆಗಳ ಸ್ವರೂಪ ಭಿನ್ನವಾಗಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. ಆದಕಾರಣ ದಿನನಿತ್ಯ ನಮ್ಮ ಆರೋಗ್ಯದ ಕಡೆ ನಾವು ಜಾಗೃತರಾಗಬೇಕು ಎಂದರು.
ಉತ್ತಮವಾದ ಆಹಾರ, ಜೀವನಶೈಲಿ ಹಾಗೂ ಮಾದಕ ವ್ಯಸನಗಳಿಂದ ದೂರವಿದ್ದಾಗ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿತ್ಯ ಬೇಗ ಎದ್ದು ವಾಕಿಂಗ್, ಯೋಗ ಮಾಡಬೇಕು. ತರಕಾರಿ, ಧಾನ್ಯಗಳ ಬಳಕೆಯಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಸಾಕುಪ್ರಾಣಿಗಳಿದ್ದರೆ ಎಚ್ಚರಿಕೆ ವಹಿಸಬೇಕು. ರೇಬಿಸ್ ಕಾಯಿಲೆ ನಾಯಿಗಳಿಂದ ಹೆಚ್ಚು ಮನುಷ್ಯನಿಗೆ ಹರಡುತ್ತದೆ. ಹಾಗಾಗಿ ನಾಯಿಗಳು ಕಚ್ಚಿದಾಗ ಸೂಕ್ತ ಚಿಕಿತ್ಸೆ ಪಡೆಯಬೇಕು. ರಕ್ತದೊತ್ತಡ, ಮಧುಮೇಹದ ಬಗ್ಗೆ ಜಾಗೃತರಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಟಿ.ಪ್ರಭುದೇವ ಹೃದಯ ಸಂಬಂಧಿ ಸಮಸ್ಯೆಗಳ ಕುರಿತು ವಿವರಿಸಿದರು. ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ. ಕೆ.ಮೋಹನ್ ಬಾಯಿ ಮತ್ತು ಹಲ್ಲುಗಳ ಆರೋಗ್ಯದ ಕುರಿತು ಮಾತನಾಡಿದರು. ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ನಾಗರಾಜ್ ನಾಯ್ಕ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಎಸ್.ರಾಜು ನಾಯ್ಕ್, ಸಹ ಪ್ರಾಧ್ಯಾಪಕಿ ಡಾ. ಪಿ.ಭಾರತಿದೇವಿ, ಎಚ್.ರುದ್ರಮುನಿ, ಡಾ. ಕೆ.ಮೋಹನ್, ವೈದ್ಯಾಧಿಕಾರಿ ಡಾ. ಎಂ.ದೇವಾನಂದ, ರವಿ ಇತರರಿದ್ದರು.