ಜಿಲ್ಲೆ

ಬಲಿಷ್ಠ ಸೇನೆಯಿಂದ ರಾಷ್ಟ್ರ ಸುರಕ್ಷಿತ

ಪ್ರಸಿನ್ ಕೆ.ಆರ್

ಪಿರಿಯಾಪಟ್ಟಣ: ಸೇನೆಯ ಶಕ್ತಿ ಬಲಿಷ್ಠವಾಗಿದ್ದಲ್ಲಿ ರಾಷ್ಟ್ರ ಸುರಕ್ಷತೆಯಿಂದ ಇರಲಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸಂಪತ್ ಅಭಿಪ್ರಾಯಪಟ್ಟರು.

ಕಾರ್ಗಿಲ್ ವಿಜಯೋತ್ಸವದ 26ನೇ ವರ್ಷದ ಸಂಭ್ರಮದ ಅಂಗವಾಗಿ ತಾಲೂಕಿನ ಹುಣಸವಾಡಿ ಸಮೀಪದ ಕೂರ್ಗ್ ವಾಟರ್ ಪಾರ್ಕ್‌ನಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಐವರು ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.

ರಾಷ್ಟ್ರವು ಶಕ್ತಿಯುತವಾಗಿ ಸಮೃದ್ಧಿಯಾಗಿ ಇರಲು ರೈತರು, ಸೈನಿಕರು, ವಿಜ್ಞಾನಿಗಳು, ದಕ್ಷ ಆಡಳಿತಗಾರರ ಕೊಡುಗೆಗಳು ಅವಿಸ್ಮರಣೀಯವಾಗಿದೆ ಎಂದರು. ಕಾರ್ಗಿಲ್ ಯುದ್ಧವು ಜನರಲ್ಲಿ ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತಿಗೊಳಿಸುವ ಜತೆಗೆ ನಮ್ಮ ಸೈನ್ಯದ ಶಕ್ತಿಯನ್ನು ವಿಶ್ವಕ್ಕೆ ಸಾಬೀತುಪಡಿಸಿದೆ ಎಂದು ಹೇಳಿದರು.

ಯುದ್ಧದ ಸಂದರ್ಭದಲ್ಲಿ ನಮ್ಮ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಗತ್ಯವಿದ್ದು, ಕಳೆದ 25 ವರ್ಷಗಳಿಗೆ ಹೋಲಿಸಿದರೆ ಭಾರತದ ಸೇನೆಯ ಶಕ್ತಿ ಮೂರರಷ್ಟು ಹೆಚ್ಚಿದೆ. ಗಡಿ ರಕ್ಷಣೆ ಮತ್ತು ಸೇನೆಯ ಆಧುನಿಕರಣದ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ಮಾತನಾಡಿ, ಸೈನಿಕರು ಮತ್ತು ರೈತರು ಈ ದೇಶದ ಬೆನ್ನೆಲುಬು. ರಾಷ್ಟ್ರದ ಗಡಿಯನ್ನು ಕಾಯುವ ಮೂಲಕ ನಮ್ಮ ರಕ್ಷಣೆಯಲ್ಲಿ ಸೈನಿಕರು ನಿರತರಾಗಿದ್ದರೆ ದೇಶಕ್ಕೆ ಅನ್ನ ನೀಡುವಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ವಿ.ಎಸ್.ರಮೇಶ್, ಕೆ.ಪಿ.ಗಣೇಶ್, ಎಂ.ರಾಮು, ಕೆ.ಸಿ.ಜಯಚಂದ್ರ, ತಿಮ್ಮೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಸಂಸ್ಥೆಯ ಸದಸ್ಯರಾದ ಕೆ.ರಮೇಶ್, ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಕೃಷ್ಣಕುಮಾರ್, ಕೆ.ಪಿ.ಪೂಣಚ್ಚ, ಪುಷ್ಪಕರ್, ಮಲ್ಲಯ್ಯ, ಎಚ್.ಎನ್.ರಾಮು, ಪ್ರವೀಣ್ ಕುಮಾರ್, ಕೆ.ಟಿ.ಯೋಗೇಶ್, ಮಹದೇವ, ಶಿವು, ಜೆ.ಸಿ.ವಿಕ್ರಂ ರಾಜ್ ಇತರರು ಇದ್ದರು.