ನೆಲಮಂಗಲ: ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬಾವಿಕೆರೆ ಗ್ರಾಮಕ್ಕೆ ಸೋಮವಾರ ನೂತನವಾಗಿ ಬಸವನಗರದ ಎಂದು ನಾಮಕರಣ ಮಾಡಿದ ಫಲಕವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಚಿಕ್ಕಣ್ಣ ಅನಾವರಣಗೊಳಿಸಿದರು.
ಗ್ರಾಮಗಳ ಗುರುತಿಸುವಿಕೆಯಲ್ಲಿ ಹೆಸರು ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಜನವಸತಿಯ ಜಾಗಕ್ಕೆ ನಾಮಕರಣ ಮಾಡುತ್ತಿರುವುದು ಸಂತಸದ ಸಂಗತಿ. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಚಂದ್ರಕಲಾ ಚಿಕ್ಕಣ್ಣ ಹೇಳಿದರು.
ಶ್ರೀ ಆಂಜನೇಯಸ್ವಾಮಿ ದೇವಾಲಯ ದತ್ತಿ ಸಮಿತಿ ಗೌರವಾಧ್ಯಕ್ಷ ಎನ್.ಗಂಗರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ರಾಜರು ನವರತ್ನ ಭೀಮಾಚಾರ್‌ಗೆ ದತ್ತು ನೀಡಿದ ಗ್ರಾಮವಾಗಿದ್ದು, ನೂರಾರು ವರ್ಷಗಳ ಇತಿಹಾಸ ಗ್ರಾಮಕ್ಕಿದೆ. ಗ್ರಾಮಕ್ಕೆ ಹೊಂದಿಕೊಂಡು ಸೊಳ್ಳೆಗುಟ್ಟೆ ಎಂದು ಜನರು ಆಡು ಭಾಷೆಯಲ್ಲಿ ಕರೆಯುತ್ತಿದ್ದ ಪ್ರದೇಶವೀಗ ಬಸವನಗರವಾಗಿ ಮಾರ್ಪಾಡಾಗಿದೆ. ಗ್ರಾಮದ ಜನರು ಹೈನುಗಾರಿಕೆ ಹೆಚ್ಚು ಆದ್ಯತೆ ನೀಡಿ ಹಸುವನ್ನು ನಂಬಿ ಜೀವನ ಸಾಗಿರುತ್ತಿರುವುದನ್ನು ಮನಗಂಡು ಬಸವನಗರ ಎಂದು ಹೆಸರಿಡಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಎಂ.ವಿ.ರುದ್ರೇಶ್, ಗ್ರಾಪಂ ಸದಸ್ಯೆ ಧನಲಕ್ಷ್ಮಮ್ಮ, ನಳಿನಾ ಮೈಲಾರಪ್ಪ, ದೇವಾಲಯ ದತ್ತಿ ಸಮಿತಿ ಅಧ್ಯಕ್ಷ ಬಿ.ಚನ್ನಪ್ಪ, ಉಪಾಧ್ಯಕ್ಷ ಮುನಿರಾಜು, ಸಹಕಾರ್ಯದರ್ಶಿ ಮಹಂತೇಶ್, ಪ್ರಧಾನ ಕಾರ್ಯದರ್ಶಿ ನಂಜಪ್ಪ, ಸದಸ್ಯರಾದ ಸಿದ್ದರಾಜು, ವೀರೇಶ್, ಬಿ.ನಾಗೇಶ್, ಬಮುಲ್ ವ್ಯವಸ್ಥಾಪಕ ನಿರ್ದೇಶಕ ಎ.ಆರ್ ಗೋಪಾಲಗೌಡ, ಡೇರಿ ಕಾರ್ಯದರ್ಶಿ ರಾಜಗೋಪಾಲ್ ಮತ್ತಿತರರಿದ್ದರು.