ರಾಮನಗರ: ಭೂಮಿಯಲ್ಲಿ ಅಡಗಿರುವ ನಿಧಿ ತಾನಾಗಿಯೇ ಮೇಲೆ ಬರುತ್ತದೆ ಎಂದು ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ಬಂಧಿಸಿರುವ ಜಿಲ್ಲಾ ಪೊಲೀಸರು, ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿನರಸಪ್ಪ ಬಂಧಿತರು. ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಯಾದಗಿರಿ ಮೂಲದ ಕೂಲಿ ಕಾರ್ವಿುಕ ಮಹಿಳೆಯನ್ನು ರಕ್ಷಿಸಲಾಗಿದೆ.
ಕನಕಪುರ ತಾಲೂಕು ಭೂಹಳ್ಳಿಯ ಶ್ರೀನಿವಾಸ್ಗೆ ‘ನಿನ್ನ ಮನೆಯಲ್ಲಿ ನಿಧಿ ಇದೆ, ಅದನ್ನು ಹೊರತೆಗೆಯಬೇಕು’ ಎಂದು ಬಂಧಿತರು ಪುಸಲಾಯಿಸಿದ್ದಾರೆ. ನಿಧಿ ಆಸೆಗಾಗಿ ಆರೋಪಿಗಳ ಜತೆ ಸೇರಿದ ಈತ, ಆಗಾಗ ರಾತ್ರೋರಾತ್ರಿ ಪೂಜೆಗಳನ್ನು ಮಾಡಿಸಿದ್ದಾರೆ. ನ.2ರಂದು ಸಹ ಪೂಜೆ ನಡೆಸಿದ್ದರು. ಮಂಗಳವಾರ ಕೂಡ ಇದೇ ಮನೆಯೊಳಗೆ ಪೂಜೆ ಸಲ್ಲಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಪರಿಚಯವಾಗಿದ್ದು ಹೀಗೆ?: ಮನೆ ಮಾಲೀಕ ಶ್ರೀನಿವಾಸ್ ತನ್ನೂರಿನಲ್ಲಿ ಏಳಿಗೆ ಕಂಡಿರಲಿಲ್ಲ. ಜಮೀನು ಕೈತಪ್ಪಿತ್ತು. ಹೀಗಾಗಿ ಊರು ಬಿಟ್ಟು ಹೆಂಡತಿ ತವರು (ಬನ್ನೂರು) ಸೇರಿಕೊಂಡಿದ್ದ. 6 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಬಂಧಿಯೊಬ್ಬರ ಸಾವಿಗೆ ಹೋಗಿದ್ದಾಗ ಮೇಸ್ತ್ರಿ ಪಾರ್ಥಸಾರಥಿ ಪರಿಚಯವಾಗಿತ್ತು. ಮನೆಯಲ್ಲಿ ನಿಧಿ ಇದ್ದರೆ, ಹೀಗೆಲ್ಲ ಆಗುತ್ತದೆ. ನಮ್ಮ ಕಡೆ ಪೂಜಾರಿಯೊಬ್ಬರು ಇದ್ದಾರೆ. ಅವರ ಬಳಿ ಮಾತನಾಡುತ್ತೇನೆಂದು ಶಶಿಕುಮಾರ್ ಪರಿಚಯಿಸಿದ್ದ. ಮನೆಯ ಒಂದು ಕೋಣೆಯಲ್ಲಿ ಭೂಮಿ ಅಗೆಯಲಾಗಿದೆ.
ಮುಂದಿನ ವಾರವು ಇತ್ತು ಪೂಜೆ: ಬೆತ್ತಲೆ ಪೂಜೆಗೆ ಕರೆತಂದಿದ್ದ ಸುಜಾತಾ ನೋಡಲು ಸುಂದರವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೂಜೆ ಫಲಿಸಲಿಲ್ಲ, ಮತ್ತೊಬ್ಬ ಸುಂದರ ಹೆಣ್ಣನ್ನು ಕರೆತನ್ನಿ. ಮುಂದಿನ ವಾರ ಮತ್ತೆ ಪೂಜೆ ಮಾಡೋಣ ಎಂದು ಬಂಧಿತರು ಹೇಳಿದ್ದರು ಎನ್ನಲಾಗಿದೆ. ಅಷ್ಟರೊಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮನೆ ಮಾಲೀಕನ ವಿರುದ್ಧ ವಂಚನೆ, ಮೌಢ್ಯ ನಿಷೇಧ ಕಾಯ್ದೆ ಉಲ್ಲಂಘನೆ, ಮಹಿಳೆ ಮೇಲಿನ ದೌರ್ಜನ್ಯ ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪತ್ನಿ ಬದಲು ಕೂಲಿ ಮಹಿಳೆ: ಬೆತ್ತಲೆ ಪೂಜೆ ಮಾಡಿದರೆ ನಿಧಿ ತಾನಾಗೇ ಮೇಲೆ ಬರುತ್ತದೆ ಎಂದು ನಂಬಿಸಿದ್ದ ಪೂಜಾರಿ ಶಿವಕುಮಾರ್, ಪೂಜೆಗೆ ಸಿದ್ಧ ವಾಗುವಂತೆ ಶ್ರೀನಿವಾಸ್ ಪತ್ನಿಗೂ ಹೇಳಿದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಅಂತಿಮವಾಗಿ ಪಾರ್ಥಸಾರಥಿ ಬಳಿ ಕೂಲಿ ಮಾಡಿ ಕೊಂಡಿದ್ದ ಮಹಿಳೆಗೆ 50 ಸಾವಿರ ರೂ. ಆಮಿಷ ತೋರಿಸಿ ಕರೆ ತಂದಿದ್ದರು. ಈಕೆಯೊಂದಿಗೆ 4 ವರ್ಷದ ಹೆಣ್ಣು ಮಗು ಇತ್ತು.
ರಾತ್ರಿ ನಿಶ್ಯಬ್ದ, ಬೆಳಗ್ಗೆ ಜಾಗ ಖಾಲಿ: ಭೂಹಳ್ಳಿಯಲ್ಲಿಯೇ ಶ್ರೀನಿವಾಸ್ ಅವರದು ದೊಡ್ಡ ಮನೆ. ನಿಧಿಗಾಗಿ ಕಳೆದ ಹುಣ್ಣಿಮೆಯಿಂದಲೂ ಪೂಜೆ ನಡೆಯುತ್ತಲೇ ಇತ್ತು. ರಾತ್ರಿ ವೇಳೆ ತಮಿಳುನಾಡು ನೋಂದಣಿ ಸಂಖ್ಯೆಯ ವಾಹನಗಳಲ್ಲಿಯೇ ಬರುತ್ತಿದ್ದ ಇವರು, ತಮ್ಮೊಂದಿಗೆ ಪುಡಿ ರೌಡಿಗಳನ್ನು ಕರೆತಂದು ಗ್ರಾಮದಲ್ಲಿ ಕಾವಲು ಕಾಯಿಸುತ್ತಿದ್ದರು. ಬೆಳಗ್ಗೆ ಆಗುತ್ತಿದ್ದಂತೆ ಎಲ್ಲರೂ ಸದ್ದಿಲ್ಲದೆ ಜಾಗ ಖಾಲಿ ಮಾಡುತ್ತಿದ್ದರು.