ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ರಾ.ಯ. ಧಾರವಾಡಕರ ಅವರು ಉತ್ತಮ ವಾಗ್ಮಿಗಳಾಗಿದ್ದರು. ಕನ್ನಡ ಭಾಷಾಶಾಸ್ತ್ರ ಉದಯಕಾಲದ ಕನ್ನಡ ಸಾಹಿತ್ಯ ಚರಿತ್ರೆ, ಧೂಮ್ರವಲಯಗಳು, ತೂರಿದ ಚಿಂತನೆಗಳು ಮೊದಲಾದ ಶ್ರೇಷ್ಠ ಕೃತಿಗಳನ್ನು ರಚಿಸಿದ ಆದರ್ಶ ಕನ್ನಡ, ಇಂಗ್ಲಿಷ್ ಪ್ರಾಧ್ಯಾಪಕರು, ದಕ್ಷ ಆಡಳಿತಗಾರರು, ಶಿಷ್ಯ ವತ್ಸಲರಾಗಿದ್ದರು ಎಂದು ಸಾಹಿತಿ ಡಾ. ಜಿನದತ್ತ ಹಡಗಲಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಡಾ. ರಾ ಯ ಧಾರವಾಡಕರ, ಈಶ್ವರ ಸಣಕಲ್ಲ ಸ್ಮಾರಕ ದತ್ತಿ, ಪ್ರೊ. ಭೂಪಾಲಪ್ಪ ಬಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ. ಭೂಪಾಲಪ್ಪ ಬಾಗಿ ಅವರು ಗಣಿತಶಾಸ್ತ್ರ ಬೋಧಿಸುವ ಅಪರೂಪದ ಪ್ರಾಧ್ಯಾಪಕರಾಗಿದ್ದರು. ಅವರ ಗಣಿತ ಬೋಧನೆ ಸಾಹಿತ್ಯ ಬೋಧನೆಯಂತೆ ಆಕರ್ಷಕವಾಗಿತ್ತು ಎಂದರು.
ಡಾ. ಎಂ.ವೈ. ಸಾವಂತ ಮಾತನಾಡಿ, ಕವಿ ಈಶ್ವರ ಸಣಕಲ್ಲ ಬಾಳಲ್ಲಿ ನೊಂದು ಬೆಂದರೂ ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ ಎಂದು ಹಾಡಿ ಬದುಕಿದರು. ಅಂಥ ಕವಿಯನ್ನು ಸಾಹಿತ್ಯ ವಿಮರ್ಶಕರು ಗಮನಿಸದಿರುವುದು ಖೇದದ ಸಂಗತಿ ಎಂದರು.
ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. 6 ಮಹಿಳಾ ತಂಡಗಳು ದೀಪಾವಳಿ ಕುರಿತು ಧಾರವಾಡದ ಕವಿಗಳು ರಚಿಸಿದ ಕವನಗಳ ಗೀತಗಾಯನ ಪ್ರಸ್ತುತಪಡಿಸಿದರು.
ನಂದಿನಿ ಅಶೋಕ ಬಾಗಿ, ಎಚ್.ಎಸ್. ಪ್ರತಾಪ್, ವಿಶ್ವನಾಥ ಅಂಗಡಿ, ಲಿಂಗರಾಜ ಪಾಟೀಲ ವೇದಿಕೆಯಲ್ಲಿದ್ದರು. ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು. ಡಾ. ಎಸ್.ಎಸ್. ದೊಡಮನಿ ಸ್ವಾಗತಿಸಿದರು. ಸುನಂದಾ ಯಡಾಲ ವಂದಿಸಿದರು. ಮಹಾಂತೇಶ ನರೇಗಲ್ ನಿರೂಪಿಸಿದರು.