ಸಿದ್ದಾಪುರ: ತಾಲೂಕಿನ ಪ್ರಮುಖ ಗ್ರಾಮೀಣ ರಸ್ತೆಯಾಗಿರುವ ಕವಲಕೊಪ್ಪ-ಗೊಂಟನಾಳ-ಬಿಳಗಿಗೆ ಸಂಪರ್ಕ ನೀಡುವ ರಸ್ತೆ ಗೊಂಟನಾಳ-ಕಲ್ಮನೆ ಹತ್ತಿರ ಪ್ರಥಮ ಮಳೆಗೆ ಕೆಸರುಗದ್ದೆಯಂತಾಗಿದ್ದು ಸಂಚಾರ ಮಾಡುವುದು ದುಸ್ತರವಾಗಿದೆ.
ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಗೊಂಟನಾಳ, ಕಲ್ಮನೆ, ಕಾನಜಡ್ಡಿ, ಸಶಿಮನೆ ಊರಿನ 50ರಿಂದ 60 ಕ್ಕೂ ಹೆಚ್ಚು ಮನೆಯವರು ಇದೇ ರಸ್ತೆಯನ್ನು ಅವಲಂಬಿಸಿ ನಿತ್ಯ ಪೇಟೆ, ಪಟ್ಟಣ, ಗ್ರಾಪಂ, ಸೇವಾ ಸಹಕಾರಿ ಸಂಘ, ಬ್ಯಾಂಕ್ ಸೇರಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅಲ್ಲದೆ, ಶಾಲಾ ಮಕ್ಕಳಿಗೂ ನಿತ್ಯ ಓಡಾಡಲು ಇದೇ ರಸ್ತೆ ಆಗಿರುವುದರಿಂದ ಸಂಚಾರ ಮಾಡುವುದು ಹೇಗಪ್ಪ ಎನ್ನುವ ಚಿಂತೆ ಈ ಭಾಗದ ಸಾರ್ವಜನಿಕರದ್ದಾಗಿದೆ.
ಕೆಸರು ಗುಂಡಿಯಂತಾದ ರಸ್ತೆ ದಾಟಿ ಮುಖ್ಯ ರಸ್ತೆಗೆ ಬರಬೇಕೆಂದರೆ ಮೂರ್ನಾಲ್ಕು ಕಿಲೋಮೀಟರ್ ನಡೆಯಬೇಕಾಗಿದೆ.
ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಕಳೆದ ಬೇಸಿಗೆಯಲ್ಲಿ ರಸ್ತೆಗೆ ಮಣ್ಣನ್ನು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಈಗ ಅದೇ ಮಣ್ಣು ಅರಲು ಗುಂಡಿಯಂತಾಗಿದೆ. ಇದರಿಂದ ನಿತ್ಯ ಓಡಾಡುವುದು ಸಂಕಟಮಯವಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಈ ಭಾಗದ ಸುತ್ತಮುತ್ತಲಿನ ಮನೆಯಲ್ಲಿ ಮದುವೆ ಮತ್ತಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತಿದೆ. ಇಲ್ಲಿ ಬಂದವರೆಲ್ಲ ಕೆಸರು ಗುಂಡಿಯ ದರ್ಶನಪಡೆದು ಅದರಲ್ಲಿಯೇ ಸರ್ಕಸ್ ಮಾಡುತ್ತ ಓಡಾಡಬೇಕಾಗಿದೆ. ಇನ್ನೇನು ಒಂದು ವಾರದಲ್ಲಿ ಶಾಲೆಗಳು ಆರಂಭವಾಗುತ್ತಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗಪ್ಪ ಎನ್ನುವ ಚಿಂತೆ ಪಾಲಕರನ್ನು ಕಾಡುತ್ತಿದೆ.
ಸಂಬಂಧಪಟ್ಟ ಇಲಾಖೆ ಸುಗಮ ಸಂಚಾರ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ನಿತ್ಯ ಓಡಾಡುವುದು ಕಷ್ಟವಾಗಿದೆ ಎಂದು ಗೊಂಟನಾಳ, ಕಲ್ಮನೆ ಹಾಗೂ ಕಾನಜಡ್ಡಿ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆಯ ಅವ್ಯವಸ್ಥೆಯಿಂದ ವಾಹನ ಚಲಾಯಿಸುವುದು ಬಿಡಿ, ಇಲ್ಲಿ ಓಡಾಡುವುದು ಕಷ್ಟವಾಗಿದೆ. ಈ ಭಾಗದಲ್ಲಿ ವೃದ್ಧರು, ಅನಾರೋಗ್ಯದಿಂದ ಇದ್ದವರು ಇದ್ದಾರೆ. ಒಮ್ಮೆ ಅವರನ್ನು ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೇಗಪ್ಪ ಎನ್ನುವ ಚಿಂತೆ ನಮ್ಮನ್ನು ಕಾಡುತ್ತಿದೆ. ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಕೂಡಲೇ ಸಂಚಾರಕ್ಕೆ ಅನುಕೂಲವಾಗುವ ಹಾಗೆ ಮಾಡಿಕೊಡಬೇಕಾಗಿದೆ. | ಅನಂತ ಹೆಗಡೆ ಗೊಂಟನಾಳ ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ಹಾರ್ಸಿಕಟ್ಟಾ