ಮಂಡ್ಯ: ಎಳನೀರು ಕುಡಿಯಲೆಂದು ತೆಂಗಿನಮರ ಹತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ದೇಹದ ಸ್ಪರ್ಶ ಜ್ಞಾನ ಕಳೆದುಕೊಂಡಿರುವ ಮಗನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಮಾಡ್ರಹಳ್ಳಿ ಗ್ರಾಮದ ಸೌಭಾಗ್ಯ ಮನವಿ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗ ರವಿಕುಮಾರ್(21) ಸೊಂಟದ ಕೆಳಭಾಗದ ಸ್ಪರ್ಶ ಜ್ಞಾನ ಕಳೆದುಕೊಂಡಿದ್ದಾನೆ. ಘಟನೆಯ ನಂತರ ಮಗನನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯತೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಮಿಮ್ಸ್ ವೈದ್ಯರು ಶಿಫಾರಸು ಮಾಡಿದ್ದಾರೆ. ಮಿಮ್ಸ್ ಹಾಗೂ ಮೈಸೂರಿನ ಕೆ.ಆರ್ ಆಸ್ಪತ್ರೆ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ನಾಲ್ಕೈದು ದಿನ ಚಿಕಿತ್ಸೆ ನೀಡಿದ್ದ ನಿಮ್ಹಾನ್ಸ್ ವೈದ್ಯರು ಫಿಜಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದಾರೆ. ಕಡುಬಡತನದ ಬಳಲುತ್ತಿರುವ ನಮಗೆ ಸ್ವಂತ ಮನೆ ಇಲ್ಲ. ಹಲವು ವರ್ಷದ ಹಿಂದೆಯೇ ಪತಿ ಸಾವಿಗೀಡಾಗಿದ್ದಾರೆ. ಪುತ್ರಿಯನ್ನು ಮದುವೆ ಮಾಡಲಾಗಿದೆ. ಕೂಲಿ ನಾಲಿ ಮಾಡಿ ಮಗನಿಗೆ ಬಿಎಸ್ಸಿ ವ್ಯಾಸಂಗ ಮಾಡಿಸುತ್ತಿದ್ದ ವೇಳೆಯಲ್ಲೇ ಇಂತಹ ದುರ್ಘಟನೆ ನಡೆದು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಭವಿಷ್ಯದಲ್ಲಿ ನೆರವಾಗಬೇಕಿದ್ದ ಮಗ ಮನೆಯಲ್ಲಿ ರೋಧಿಸುತ್ತಿರುವುದು ಒಂದೆಡೆಯಾದರೆ, ಕೂಲಿಗೂ ತೆರಳಲಾಗದೇ ಜೀವನ ನಡೆಸಬೇಕಾದ ದುಸ್ಥಿತಿ ಮತ್ತೊಂದೆಡೆ ಎದುರಾಗಿದೆ. ಇಂತಹ ಸಂಕಷ್ಟದಿಂದ ಪಾರಾಗಲು ಮಗನಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದ್ದು ಆರ್ಥಿಕ ನೆರವಿಗೆ ಸಮಾಜದ ಉಳ್ಳವರು ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದಾನಿಗಳು ರವಿಕುಮಾರ್.ಸಿ ಬಿನ್ ಲೇಟ್ ಚಿಕ್ಕಣ್ಣ ಅವರ ಎಸ್‌ಬಿಐ ಬ್ಯಾಂಕ್ ಖಾತೆ ಸಂಖ್ಯೆ 40488132749, ಐಎಫ್ಎಸ್ಸಿ ಕೋಡ್ SBIM0041016 ಖಾತೆಗೆ ಹಣ ಸಹಾಯ ಮಾಡಬಹುದು.