ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಬಾವಿಯ ಸ್ಥಳಕ್ಕೆ ಎಸ್ಪಿ ಜಯಪ್ರಕಾಶ, ಡಿವೈಎಸ್‌ಪಿ ಶಾಂತವೀರ ಈ. ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ!

ಜಮಖಂಡಿ: ವರ ಮಹಾಲಕ್ಷ್ಮಿ ಹಬ್ಬದ ದಿನದಂದೇ, ಮೊದಲ ಮಗು ಗಂಡು ಸಂತಾನ ಇದ್ದರೂ ಮೂರನೇ ಹೆರಿಗೆಯಲ್ಲಿ ಗಂಡು ಮಗ ಆಗಲಿಲ್ಲ ಎಂದು ಬೇಸರಗೊಂಡ ತಾಯಿ, ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು ತನ್ನ ಮೂರು ಮಕ್ಕಳನ್ನು ಬಾವಿಗೆ ತಳ್ಳಿ, ತಾನು ಜಿಗಿದ ಘಟನೆ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಆದರೆ ಘಟನೆಯಲ್ಲಿ ಮೂವರು ಮಕ್ಕಳಾದ ಮಗ ಶ್ರೀಶೈಲ (5), ಮಗಳು ಶ್ರಾವಣಿ (3) ಹಾಗೂ 20 ದಿನ ಹೆಣ್ಣು ಹಸಿಗೂಸು ಸೌಜನ್ಯ ಸಾವನ್ನಪ್ಪಿದ್ದು, ತಾಯಿ ಮಾಯವ್ವ (ಸಂಗೀತಾ) ಗುಡೆಪ್ಪನವರ (25) ಅಲ್ಪಸ್ವಲ್ಪ ಈಜು ಬರುತ್ತಿದ್ದುದರಿಂದ ಬದುಕಿ ಉಳಿದಿದ್ದಾಳೆ.

ಸಂಗೀತಾಗೆ ಒಟ್ಟು ಮೂವರು ಮಕ್ಕಳಿದ್ದಾರೆ. ಮೊದಲ ಹೆರಿಗೆಯಲ್ಲಿ ಗಂಡು ಮಗುವಾಗಿತ್ತು. ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಾಗಿದ್ದು, ಮೂರನೇ ಮಗು ಗಂಡು ಆಗಬೇಕೆಂಬ ಅಪೇಕ್ಷೆಯಿತ್ತು. ಆದರೆ ಹೆಣ್ಣು ಮಗು ಜನಿಸಿದ್ದರಿಂದ ಬೇಸರಗೊಂಡಿದ್ದಳು.

ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್, ಡಿವೈಎಸ್‌ಪಿ ಶಾಂತವೀರ ಈ., ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಮಹೇಶ ಸಂಕ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಯಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ