ಹುಬ್ಬಳ್ಳಿ: ನವಜಾತ ಶಿಶುಗಳಿಗೆ ಕಟ್ಟಿದ್ದ ಟ್ಯಾಗ್ ಕಳಚಿಬಿದ್ದು ತಾಯಿಗೆ ಬೇರೆ ಮಗು ವರ್ಗಾವಣೆಯಾಗಿದ್ದು, ಆರೋಪ ಹೊರಬರುತ್ತಿದ್ದಂತೆ ಅರ್ಧ ಗಂಟೆಯಲ್ಲಿಯೇ ಅವರವರ ಮಗು ಪಾಲಕರ ಮಡಿಲು ಸೇರಿದ ಘಟನೆ ನಗರದ ಕಿಮ್ಸ್‌ನಲ್ಲಿ ಬುಧವಾರ ನಡೆದಿದೆ.
ಆಸ್ಪತ್ರೆಯಲ್ಲಿ ಸೆ. 3ರಂದು ಜನಿಸಿದ ಗಂಡು ಮತ್ತು ಹೆಣ್ಣು ಮಗುವನ್ನು ಎನ್‌ಐಸಿಯುನಲ್ಲಿರಿಸಲಾಗಿತ್ತು. 4 ತಾಸಿಗೊಮ್ಮೆ ಮಗುವಿಗೆ ಹಾಲು ಕುಡಿಸಲು ತಾಯಿಗೆ ಕೊಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಕಟ್ಟಿದ್ದ ಟ್ಯಾಗ್ ಕಳಚಿ ಬಿದ್ದಿದೆ.
ಆಗ ಎನ್‌ಐಸಿಯುನಲ್ಲಿದ್ದ ಮಗು ಬೇರೆಯವರ ಕೈ ಸೇರಿದೆ. ಹೆಣ್ಣು ಹೆತ್ತಿದ್ದ ಹುಬ್ಬಳ್ಳಿಯ ಬೀಬಿಜಾನ್ ಎನ್ನುವರ ಕೈಗೆ ಗಂಡು ಮಗು ಹೋದರೆ, ಗಂಡು ಹೆತ್ತಿದ್ದ ಗದಗಿನ ಸೂರಣಗಿಯ ಮುತ್ತವ್ವನ ಕೈಗೆ ಹೆಣ್ಣು ಮಗು ಸೇರಿದೆ. ಹಾಲು ಕುಡಿಸುವ ಮುನ್ನ ಮುತ್ತವ್ವ ಅವರು ‘ನನ್ನದು ಗಂಡು ಮಗು, ಹೆಣ್ಣಲ್ಲ’ ಎಂದಿದ್ದಾರೆ.
ಈ ಸುದ್ದಿ ಪೂಜಾರ ಕುಟುಂಬದವರಿಗೆ ತಲುಪುತ್ತಿದ್ದಂತೆ, ‘ಹೆಣ್ಣು ಮಗು ನಮಗೇಕೆ ಕೊಟ್ಟಿದ್ದೀರಿ? ಎಂದು ತಗಾದೆ ತೆಗೆದಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನವಜಾತ ಶಿಶುಗಳಿಗೆ ಕಟ್ಟಿದ್ದ ಟ್ಯಾಗ್ ಕಳಚಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದರಿತ ವೈದ್ಯಕೀಯ ಸಿಬ್ಬಂದಿ, ಕೊನೆಗೆ ಅವರವರ ಪಾಲಕರ ಕೈಗೆ ಶಿಶುಗಳನ್ನು ಹಸ್ತಾಂತರಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ‘ನವಜಾತ ಶಿಶುಗಳಿಗೆ ಕಟ್ಟಿರುವ ಟ್ಯಾಗ್ ಕಳಚಿ ಬಿದ್ದಿದ್ದರಿಂದ ಈ ಸಮಸ್ಯೆ ಉಂಟಾಗಿತ್ತು. ಈಗ ಸಮಸ್ಯೆ ಬಗೆಹರಿದಿದೆ. ಕರ್ತವ್ಯದಲ್ಲಿ ನಿರ್ಲಕ್ಷೃ ತೋರಿದ ಸಿಬ್ಬಂದಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗುವುದು’ ಎಂದರು.