ಜಿಲ್ಲೆ

ಅತ್ಯಂತ ಪ್ರತಿಭಾ ಸಂಪನ್ನ ಸಮಾಜ ‘ವಿಶ್ವಕರ್ಮ‘

ನರೇಗಲ್ಲ: ವಿಶ್ವಕರ್ಮ ಸಮಾಜದವರ ಕರಕುಶಲತೆಯು ಈ ಜಗತ್ತಿನಲ್ಲಿಯೆ ಅತ್ಯಂತ ಪ್ರಸಿದ್ಧವಾದುದು. ಅದಕ್ಕಾಗಿ ನಮ್ಮ ನಮನಗಳು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾನದ ಲಕ್ಷ ದೀಪೋತ್ಸವ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬಾಗಿ ಬಂದವರನ್ನು ರಕ್ಷಿಸುವ, ಬೀಗಿ ಬಂದವರನ್ನು ಶಿಕ್ಷಿಸುವ ಕಾಳಿಕಾ ಮಾತೆಯನ್ನು ತಮ್ಮ ಕುಲ ಗುರುವಾಗಿ ಪಡೆದಿರುವ ವಿಶ್ವಕರ್ಮ ಸಮಾಜ ಅತ್ಯಂತ ಪ್ರತಿಭಾ ಸಂಪನ್ನ ಸಮಾಜವಾಗಿದೆ. ದೇವಿ ಆರಾಧನೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದವರು ರಾಮಕೃಷ್ಣ ಪರಮಹಂಸರು. ಅವರು ಮಾಡಿದ ಕಾಳಿಕಾ ಮಾತೆಯ ಪೂಜೆಯು ವಿಶ್ವಕರ್ಮ ಸಮಾಜಕ್ಕೊಂದು ವರದಾನ. ಯುವ ಪೀಳಿಗೆ ವಿಶ್ವಕರ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕು ಎಂದರು.

ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ನಮಸ್ಕಾರ ಮಾಡುವ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದೇ ಈ ಸಮಾಜ. ಇವರಿಂದ ನಿರ್ವಣಗೊಂಡ ಅದೆಷ್ಟೋ ಕಲಾಕೃತಿಗಳು ಇಂದಿಗೂ ಈ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಕಾಯದುಕೊಂಡಿವೆ. ಇಂತಹ ಸೇವೆ ಸಲ್ಲಿಸಿರುವ ಸಮಾಜಕ್ಕೆ ನಾವೆಂದಿಗೂ ಕೃತಜ್ಞರಾಗಿರಬೇಕೆಂದರು.

ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಧಾರ್ವಿುಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇಂತಹ ಕಾರ್ಯಗಳು ಮೇಲಿಂದ ಮೇಲೆ ಜರುಗುತ್ತಿದ್ದರೆ ಗ್ರಾಮಗಳು ಶಾಂತವಾಗಿರುತ್ತವೆ. ನರೇಗಲ್ಲದ ವಿಶ್ವಕರ್ಮ ಸಮಾಜ ಎಂದಿಗೂ ರಚನಾತ್ಮಕ ಕಾರ್ಯಗಳಿಗೆ ಮುಂದು ಎಂದರು.

ಜಗನ್ನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಿವಶಕ್ತಿಯರ ಆರಾಧನೆ ಅನಾದಿ ಕಾಲದಿಂದಲೂ ಭಾರತದಲ್ಲಿ ನಡೆದು ಬಂದಿದೆ. ಈ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಶಕ್ತಿ ದೊರಕುತ್ತದೆ. ನರೇಗಲ್ಲದ ವಿಶ್ವಕರ್ಮ ಸಮಾಜದವರು ಲಕ್ಷ ದೀಪೋತ್ಸವವನ್ನು ನೆರವೇರಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.

ಹೊಳೆಆಲೂರಿನ ಯಚ್ಚರೇಶ್ವರ ಸ್ವಾಮೀಜಿ, ಇಳಕಲ್ಲಿನ ವಿಶ್ವನಾಥ ಸ್ವಾಮೀಜಿ, ದಿವಾಕರ ಸ್ವಾಮೀಜಿ ಆಶೀರ್ವಚನ ನೀಡಿದರು. ಭೀಮಸೇನ ಬಡಿಗೇರ, ಶಶಿಕಲಾ ಪಾಟೀಲ, ಅರುಣ ಕುಲಕರ್ಣಿ, ಶಿವನಗೌಡ ಪಾಟೀಲ, ದಾವೂದಲಿ ಕುದರಿ, ಕುಮಾರಸ್ವಾಮಿ ಕೋರಧಾನ್ಯಮಠ, ಕಲ್ಮೇಶ ತೊಂಡಿಹಾಳ, ರಾಮಣ್ಣ ನವಲಿ, ಶೇಕಪ್ಪ ಜುಟ್ಲ, ನಾರಾಯಣ ವಡ್ಡಟ್ಟಿ, ಅಲ್ಲಾಭಕ್ಷಿ ನದಾಫ್, ಸುನೀಲ ಬಸವರಡ್ಡೇರ ಇನ್ನೂ ಮುಂತಾದವರಿದ್ದರು. ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಮೌನೇಶ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸಿಂಧೂ ಪಾಟೀಲ ಮತ್ತು ದೃಷ್ಟಿ ಪತ್ತಾರರ ನೃತ್ಯ ಗಮನ ಸೆಳೆಯಿತು. ಸುರೇಶ ಪತ್ತಾರ ನಿರೂಪಿಸಿದರು. ವಿಠ್ಠಲ ಪತ್ತಾರ ಸ್ವಾಗತಿಸಿದರು.ಸುರೇಶ ಪತ್ತಾರ ನಿರೂಪಿಸಿದರು.