ಕುಮಟಾ: ಇಂದಿನ ಮಕ್ಕಳು ಹುಟ್ಟು ಪ್ರತಿಭೆಗಳು. ಮೂಲಸೌಕರ್ಯಗಳಿಗೆ ಹಿಂದಿನಷ್ಟು ಕೊರತೆ ಇಲ್ಲ. ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿಭಾ ಅನಾವರಣಕ್ಕೆ ಪೂರಕವಾಗಿ ಎಲ್ಲರೂ ಪ್ರೋತ್ಸಾಹ ನೀಡಿದರೆ ಉನ್ನತ ಸಾಧನೆ ಮಾಡಬಲ್ಲರು ಎಂದು ಗೋವಾ ರಾಜ್ಯದ ಜಲ ಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಹೇಳಿದರು.
ಪಟ್ಟಣದ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್‌ನ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಬದುಕಿಗೆ ಆಧಾರ. ಸತತ ಪರಿಶ್ರಮವೇ ಯಶಸ್ಸಿಗೆ ಕಾರಣ. ಎಲ್ಲ ಪಾಲಕರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸುಶಿಕ್ಷಿತರು ಹೆಚ್ಚಿದಷ್ಟೂ ಸಮಾಜ ಸುಧಾರಿಸುತ್ತದೆ ಎಂದರು.
ಲಯನ್ಸ್ ಕ್ಲಬ್‌ನ ಗಿರೀಶ ಕುಚ್ಚಿನಾಡ ಮಾತನಾಡಿ, ಹೊಸ ಶಿಕ್ಷಣ ನೀತಿ ಒಳ್ಳೆಯ ಯೋಜನೆ. ಮಕ್ಕಳಿಗೆ ಬೇಕಾಗುವುದನ್ನು ಕಲಿಯಲು ಅದು ಅವಕಾಶ ಕಲ್ಪಿಸುತ್ತದೆ. ಆದರೆ ಅದು ಜಾರಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಮಿಲಿಂದ್ ಕುಲಕರ್ಣಿ ಮಾತನಾಡಿ, ಕಲಿಕೆ ನಿರಂತರವಾಗಿರಬೇಕು. ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ನಾವು ಸಾಗಬೇಕು. ನಾವು ಸದಾ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ಇರುತ್ತೇವೆ. ಸಾಧ್ಯವಾದ ಎಲ್ಲ ಸೇವೆಗಳನ್ನೂ ಮಾಡಲು ಸಿದ್ದರಿದ್ದೇವೆ ಎಂದರು.
ಖಜಾಂಚಿ ಎಚ್.ಎನ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 20 ಲಕ್ಷ ರೂ. ಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತಿದೆ ಎಂದರು. ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಷಡಕ್ಷರಿ, ವಾಲಿಬಾಲ್ ಆಟಗಾರ ಯತೀಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಮಹಾಲಕ್ಷ್ಮಿ ಪ್ರಾರ್ಥಿಸಿದಳು. ಟ್ರಸ್ಟ್‌ನ ಕಾರ್ಯದರ್ಶಿ ಸತೀಶ ಎಸ್. ನಾಯ್ಕ ಸ್ವಾಗತಿಸಿದರು. ಸತೀಶ ಬಿ. ನಾಯ್ಕ , ಪ್ರಶಾಂತ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಗದಾಯುದ್ಧ ಯಕ್ಷಗಾನ ಪ್ರದರ್ಶನ ಯಕ್ಷ ಕಲಾರಸಿಕರನ್ನು ರಂಜಿಸಿತು.