ಜಿಲ್ಲೆ

ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ ಜ್ಯೋತಿ

ಪ್ರಸಿನ್ ಕೆ.ಆರ್

ಕೊಳ್ಳೇಗಾಲ: ಇತಿಹಾಸ ಪ್ರಸಿದ್ಧ ತಾಲೂಕಿನ ಚಿಕ್ಕಲ್ಲೂರಿನ ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿ ಜಾತ್ರೆಯ ಮೊದಲ ದಿನ ಸೋಮವಾರ ಚಂದ್ರಮಂಡಲದ ದಿವ್ಯಜ್ಯೋತಿ ಉತ್ತರಕ್ಕೆ ವಾಲಿತು.

ವಷರ್ದ ಆರಂಭದ ಹುಣ್ಣಿಮೆ ಬೆಳದಿಂಗಳಲ್ಲಿ ನಡೆಯುವ ಭಕ್ತಿ-ಪರಾಕಾಷ್ಟೆಯ ಆಚರಣೆಯನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು. ಶ್ರೀ ಸಿದ್ದಪ್ಪಾಜಿ ಗದ್ದುಗೆ ಆವರಣದಲ್ಲಿರುವ ಚಂದ್ರಮಂಡಲ ಕಟ್ಟೆಯ ಬಳಿಗೆ ರಾತ್ರಿ 1.10 ಗಂಟೆ ಸಮಯಕ್ಕೆ ಚೆನ್ನಯ್ಯ-ಲಿಂಗಯ್ಯ ಕಂಡಾಯಗಳು, ಬಸವ, ನಿಶಾನೆ, ಸತ್ತಿಗೆ, ಸೂರಪಾನಿ, ನೀಲಗಾರರು ತಮಟೆ, ವಾದ್ಯ ಇಮ್ಮೇಳ ಹಾಗೂ ನೀಲಗಾರರ ಜಾಗಟೆ ಸದ್ದಿನಲ್ಲಿ ಆಗಮಸಿದ ರಾಜಬೊಪ್ಪೆ ಗೌಡನಪುರದ ಶ್ರೀ ಜ್ಞಾನಾನಂದ ಚೆನ್ನರಾಜೇಅರಸ್ ಅವರು ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ಧ ಪಡಿಸಿದ್ದ ಕಳಶಾಕೃತಿಯ ಬಿದುರಿನ ಚಂದ್ರಮಂಡಲಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ರಾತ್ರಿ 11.42ರಲ್ಲಿ ಅಗ್ನಿಸ್ಪರ್ಶ ಮಾಡಿದರು. ಚಂದ್ರಮಂಡಲ ಸುತ್ತಲೂ ನೆರೆದಿದ್ದ ಭಕ್ತ ವೃಂದ ಹರ್ಷೋದ್ಗಾರ, ಆಕಾಶಾಭಿಮುಖವಾಗಿ ಹೊತ್ತಿ ಉರಿದ ಚಂದ್ರ ಮಂಡಲದ ಜ್ಯೋತಿ ಉತ್ತರ ದಿಕ್ಕಿಗೆವಾಲಿತು. ಚಂದ್ರ ಮಂಡಲದ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆಯೋ ಆ ಭಾಗಕ್ಕೆ ವರ್ಷವಿಡೀ ಮಳೆ, ಬೆಳೆ ಹಾಗೂ ಸಕಲವು ಸಮೃದ್ಧಿಯಾಗಿರುತ್ತದೆ ಎಂಬುದು ನಂಬಿಕೆಯಾಗಿದೆ.

ಹೊರ ಜಿಲ್ಲೆಯ ಭಕ್ತರೇ ಹೆಚ್ಚು: ಚಂದ್ರಮಂಡಲಕ್ಕೆ ಜಿಲ್ಲೆಯ ನಾಲ್ಕು ತಾಲೂಕು ಹಾಗೂ ಮಂಡ್ಯ, ರಾಮನಗರ, ಕನಕಪುರ, ತಮಕೂರು, ಬೆಂಗಳೂರಿನಲ್ಲಿರುವ ಮಂಟೇಸ್ವಾಮಿ ಒಕ್ಕಲಿಗೆ ನಡೆದುಕೊಳ್ಳುವ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬಿಡಾರಗಳಲ್ಲಿ ತಂಗಿ ಪೂಜಾ ಕೈಂಕರ್ಯ ನಡೆಸಿದರು.

ಚಂದ್ರಮಂಡಲ ಉತ್ಸವದಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಶ್ರೀ ಮಂಟೇಸ್ವಾಮಿ ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಉಗ್ರ ನರಸಿಂಹಗೌಡ, ಪರಂಪರೆ ಹೋರಾಟ ಸಮಿತಿ ಪ್ರತಿನಿಧಿ ಮಹದೇವ ಶಂಕನಪುರ, ಶಂಭುಲಿಂಗೇಶ್ವರ ಸ್ವಾಮಿ, ಮುಖಂಡ ಚೇತನ್ ದೊರೈರಾಜ್ ಪಾಲ್ಗೊಂಡಿದ್ದರು.