ಅರಕಲಗೂಡು ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ತಂಬಾಕು ನಾಟಿ ಮಾಡಿದ ಜಮೀನಿನಲ್ಲಿ ನೀರು ನಿಂತು ಗಿಡಗಳು ಹಾಳಾಗುತ್ತಿವೆ. 
ಜಿಲ್ಲೆ

ಮುಂಗಾರು ಅಬ್ಬರಕ್ಕೆ ಅನ್ನದಾತ ಕಂಗಾಲು

ಅರಕಲಗೂಡು : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಬೆಳೆಗಳು ಜಲಾವೃತಗೊಂಡು ರೈತರು ಫಸಲು ಕಳೆದುಕೊಳ್ಳುವ ಆತಂಕ ಎದುರಿಸುವಂತಾಗಿದೆ.

ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು ಅತಿಯಾದ ತೇವಾಂಶಕ್ಕೆ ಸಿಲುಕಿ ನೆಲಕಚ್ಚುತ್ತಿದೆ. ಎಡಬಿಡದೇ ಬೀಳುತ್ತಿರುವ ಮಳೆಗೆ ತಗ್ಗು ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿದ ಜಮೀನಿನಲ್ಲಿ ನೀರು ನಿಂತು ಹಾಳಾಗಾಗುತ್ತಿವೆ. ಬಸಿ ಕಾಲುವೆ ತೆಗೆದು ನೀರು ಹೊರ ಕಳುಹಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಆದರೆ ನಿರಂತರ ಮಳೆಯಿಂದಾಗಿ ಕೆಲವೆಡೆ ಬೆಳೆ ಜಮೀನಿನಲ್ಲಿ ನೀರು ಹೊರ ಹೋಗದೆ ಜಲಾವೃತಗೊಂಡಿದೆ.

ತಂಬಾಕು ಮಾತ್ರವಲ್ಲದೇ ಶುಂಠಿ, ಆಲೂಗಡ್ಡೆ, ಮುಸುಕಿನ ಜೋಳ, ಉದ್ದು ಹೆಸರು ಆಸಲಂದ ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳು ಮಳೆ ನೀರು ಪಾಲಾಗುತ್ತಿವೆ. ವರುಣನ ಆರ್ಭಟಕ್ಕೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಒಂದೆಡೆ ಮಳೆ ನೀರು ಮತ್ತೊಂದೆಡೆ ನದಿ ಉಕ್ಕೇರಿ ತಂಬಾಕು ಮತ್ತಿತರ ಬೆಳೆ ಜಮೀನು ನೀರಿನಲ್ಲಿ ಮುಳುಗಿ ಕೊಳೆಯುತ್ತಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ಹಲವೆಡೆ ಕೊಲ್ಲಿ ಭಾಗದಲ್ಲಿ ನುಗ್ಗುತ್ತಿರುವ ಕಾವೇರಿ ನದಿಗೆ ಬೆಳೆ ಜಮೀನಿನಲ್ಲಿ ಜಲಾವೃವಾಗಿದೆ. ಆಲಸಂದೆ, ಉದ್ದು, ಹೆಸರು, ಎಳ್ಳು ಹಾಗೂ ತೋಟದ ಬೆಳೆಗಳು ಹೆಚ್ಚಿನದಾಗಿ ಕೊಳೆತು ಹಾನಿಗೊಳಗಾಗುತ್ತಿವೆ.

ತಂಬಾಕು ನಾಟಿ ಮಾಡಿ ಹಲವೆಡೆ ರಸಗೊಬ್ಬರ ನೀಡಿ ಕಳೆ ತೆಗೆಯಲಾಗಿತ್ತು. ಇನ್ನು ಕೆಲವು ಕಡೆ ನಾಟಿ ಮಾಡಿದ ಗಿಡಗಳಿಗೆ ರಸಗೊಬ್ಬರ ನೀಡಲು ಸಾಧ್ಯವಾಗಿಲ್ಲ, ಇಷ್ಟು ಬೇಗ ಪೂರ್ವ ಮುಂಗಾರು ಒಂದೇ ಸಮನೆ ಸುರಿಯುತ್ತಿರುವುದರಿಂದ ಬೆಳೆ ಆರೈಕೆಗೆ ತೊಡಕಾಗಿದೆ. ನಾಟಿ ಮಾಡಿದ ಗಿಡಗಳನ್ನು ಉಳಿಸಿಕೊಳ್ಳಲಾಗದೆ ತೇವಾಶದಿಂದ ಕೊಳೆತು ನಾಶವಾಗುತ್ತಿವೆ. ಅತಿವೃಷ್ಟಿಗೆ ಬೆಳೆ ಕುಂಠಿತಗೊಂಡು ಬೆಳೆಗಾಗಿ ಮಾಡಿದ್ದ ಸಾಲ ತೀರಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ ಎಂದು ಬೆಳೆಗಾರರು ಅವಲತ್ತುಕೊಂಡಿದ್ದಾರೆ.

ಈ ಭಾಗದಲ್ಲಿ ತಂಬಾಕು ಬೆಳೆ ರೈತರ ಪ್ರಮುಖ ಆದಾಯದ ಮೂಲವಾಗಿದೆ. ಇದೀಗ ಬೆಳೆ ನಾಟಿ ಮಾಡಿದ ಆರಂಭದಲ್ಲೇ ನಿರಂತರ ಮಳೆಗೆ ಸಿಲುಕಿ ಬೆಳೆ ಕಳೆದುಕೊಳ್ಳುವಂತಾಗಿದೆ. ಇದರಿಂದ ತಂಬಾಕು ಬೆಳೆಯನ್ನೆ ನೆಚ್ಚಿಕೊಂಡಿದ್ದ ಅನ್ನದಾತರಿಗೆ ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸುವಂತಾಗಿದೆ ಎಂಬುದು ಬೆಳೆಗಾರರ ಅಳಲಾಗಿದೆ.

---------

26ಎಆರ್‌ಕೆ1..

ಅರಕಲಗೂಡು ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ತಂಬಾಕು ನಾಟಿ ಮಾಡಿದ ಜಮೀನಿನಲ್ಲಿ ನೀರು ನಿಂತು ಗಿಡಗಳು ಹಾಳಾಗುತ್ತಿವೆ.