ರಾಯಚೂರು: ಜನರು ದೇವರ ಹುಂಡಿಗೆ ಹಾಕುವ ಹಣ ದಾನವಲ್ಲ. ಅದು ಅವರು ಮಾಡಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ನೀಡಿದ ಹಣವಾಗಿದೆ. ಬಡವರು, ಸಂಕಷ್ಟದಲ್ಲಿರುವವರಿಗೆ ನೀಡುವುದು ದಾನವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಹಾಗೂ ಕಸಾಪ ತಾಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಳಿಸಿದ ಹಣದಲ್ಲಿ ಬಡವರಿಗೆ ದಾನ ಮಾಡುವುದಕ್ಕಿಂತ ದೊಡ್ಡ ಪೂಜೆ ಯಾವುದಿಲ್ಲ. ಆದರೆ ತಮ್ಮ ಪಾಪವನ್ನು ತೊಳೆದುಕೊಳ್ಳಲು ದೇವರ ಹುಂಡಿಗೆ ಕೆಜಿಗಟ್ಟಲೆ ಚಿನ್ನ, ಹಣ ಹಾಕುವುದರಿಂದ ಯಾವ ಪುಣ್ಯವೂ ದೊರೆಯುವುದಿಲ್ಲ. ಕೂಲಿ ಮಾಡುವ ಯುವಕ ದುಡಿದ ಹಣದಲ್ಲಿ ಮಕ್ಕಳಿಗೆ ಸೈಕಲ್ ಕೊಡಿಸಿರುವಂತಹ ಪುಣ್ಯದ ಕೆಲಸ ಬೇರೊಂದಿಲ್ಲ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ದೇಶ ಹಾಳಾಗುತ್ತದೆ ಎನ್ನಲಾಗುತ್ತದೆ. ಆದರೆ ಶಕ್ತಿ ಯೋಜನೆಯಿಂದ ಮಹಿಳೆಯರು ಓಡಾಡುವಂತಾಗಿದ್ದು, ಅದು ನಿಜವಾದ ಮಹಿಳಾ ಸಶಕ್ತಿಕರಣವಾಗಿದೆ. ಉತ್ತರ ಕರ್ನಾಟಕದ ಪ್ರದೇಶ ಸಾಮಾಜಿಕ ಸಹಿಷ್ಣುತೆಗೆ ಹೆಸರಾಗಿದ್ದು, ಅದನ್ನು ಇಲ್ಲಿನ ಜನರು ನಿರಂತರವಾಗಿ ಸಾಬೀತು ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಂ.ವೀರಭದ್ರಪ್ಪ ಹೇಳಿದರು.
ಕಲಾ ಸಂಕುಲ ಸಂಸ್ಥೆ ಕಾರ್ಯದರ್ಶಿ ಮಾರುತಿ ಬಡಿಗೇರ ಮಾತನಾಡಿ, ಸಂಸ್ಥೆ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಾ ಬಂದಿದೆ. ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ, ಗಾಯನ ಕಾರ್ಯಕ್ರಮಗಳು ಜರುಗಿದವು.
ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿವಿ ಕುಲಸಚಿವ ಡಾ.ಎಂ.ವೀರನಗೌಡ, ರೋಟರಿ ಕ್ಲಬ್ ಸೆಂಟ್ರಲ್‌ನ ಡಾ.ಶರಣಬಸವ ಜೋಳದಹೆಡಗಿ, ಡಿಎಚ್‌ಒ ಡಾ.ಸುರೇಂದ್ರಬಾಬು, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ವೈದ್ಯರಾದ ಡಾ.ರಾಮಪ್ಪ, ಡಾ.ನಾಗರಾಜ ಭಾಲ್ಕಿ ಉಪಸ್ಥಿತರಿದ್ದರು.