ಕನಕಪುರ: ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೊಂಗಾಣಿದೊಡ್ಡಿ ಗ್ರಾಮವನ್ನು ನಿಯಮ ಉಲ್ಲಂಸಿ ತಮ್ಮಹೆಸರಿಗೆ ಬರೆಸಿಕೊಂಡು ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಒಂಬತ್ತು ಕುಟುಂಬಗಳ ಮಹಿಳೆಯರು ಮಾನವ ಹಕ್ಕು ಆಯೋಗದ ನೆರವು ಕೋರಿ ದೂರು ಸಲ್ಲಿಸಿದ್ದು, ಆಯೋಗದಲ್ಲಿ ಪ್ರಕರಣ ದಾಖಲಾಗಿದೆ.
ಏನಿದೆ ದೂರಿನಲ್ಲಿ?: ಕನಕಪುರ ತಾಲೂಕು ಅಚ್ಚಲು ಪಂಚಾಯಿತಿಯ ಹೊಂಗಾಣಿದೊಡ್ಡಿಯಲ್ಲಿ ಗೇಣಿದಾರರಿಗೆ ಸೇರಿದ್ದ 140 ಎಕರೆ ಜಮೀನಿನಲ್ಲಿ 66 ಎಕರೆಯನ್ನು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅಕ್ರಮವಾಗಿ ಅವರ ಹೆಸರಿಗೆ ಬರೆಸಿಕೊಂಡು ಅನ್ಯಾಯ ಮಾಡಿದ್ದಾರೆಂದು ಗ್ರಾಮದಲ್ಲಿ ಹೋರಾಟ ನಡೆಸಲಾಗಿತ್ತು. ಅಲ್ಲದೆ ಶಾಸಕರ ಕ್ರಮ ಪ್ರಶ್ನಿಸಿ, ಲೋಕಾಯುಕ್ತರ ಮೂಲಕ ಭೂ ನ್ಯಾಯ ಮಂಡಳಿಯಲ್ಲಿ ನ್ಯಾಯ ಕೋರಲಾಗಿತ್ತು. ಉಳುವವನೇ ಭೂಮಿಯ ಒಡೆಯ ಎಂಬ ಸರ್ಕಾರದ ನಿಯಮದಂತೆ ಗ್ರಾಮದ ಒಟ್ಟು 140 ಎಕರೆ ಜಮೀನಿನಲ್ಲಿ ತಲತಲಾಂತರದಿಂದ ಜೀವನ ಸಾಗಿಸುತ್ತಿರುವವರಿಗೆ 2ರಿಂದ 5 ಎಕರೆವರೆಗೆ ಜಮೀನು ಮಂಜೂರಾಗಿದ್ದವು. ಆದರೆ, ಶಾಸಕರು ಅಕ್ರಮವಾಗಿ ಖಾತೆ ಮಾಡಿಸಿ, ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದರು. ಗ್ರಾಮದಲ್ಲಿ ಪ್ರತಿಭಟನೆ ಕೂಗು, ಹೋರಾಟ ಕಿಚ್ಚು ಹೆಚ್ಚಾದ ಕಾರಣ 66 ಎಕರೆ ಜಮೀನನ್ನು ಬಿಟ್ಟುಕೊಡುವುದಾಗಿ ಶಾಸಕರು ವಾಗ್ದಾನ ನೀಡಿದ್ದರು. ಆದರೆ ವಾಗ್ದಾನ ಈಡೇರಿಲ್ಲ, ಬದಲಿಗೆ ಕಂಟಕವಾಗಿ ಪರಿಣಮಿಸಿದೆ. ಭೂ ನ್ಯಾಯಮಂಡಳಿ ಈ ಪ್ರಕರಣದಲ್ಲಿ ನಾಮ್ಕೇವಾಸ್ತೆ ನಾಟಕವಾಡಿ ಮತ್ತೆ ಮೌನ ವಹಿಸಿದೆ ಎಂದು ಮಹಿಳೆಯರು ದೂರಿನಲ್ಲಿ ಆರೋಪಿಸಿದ್ದಾರೆ.
ಶಾಸಕರ ವಿರುದ್ಧ ಧ್ವನಿ ಎತ್ತಿದವರ ಬಂಧನ
ಭೂ ಕರ್ಮಕಾಂಡದ ವಿರುದ್ಧ ಪ್ರತಿಭಟನೆಗಳು ನಡೆಸುತ್ತಿರುವ ಮಧ್ಯೆ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯ ನಂಜೇಶ್ ಹತ್ಯೆಯಾಗಿತ್ತು. ಈ ಕೊಲೆಯನ್ನೇ ದಾಳವಾಗಿ ಬಳಸಿಕೊಂಡ ಕಾಂಗ್ರೆಸ್ ಪ್ರಭಾವಿ ಮುಖಂಡರು ಪ್ರತಿಕಾರಕ್ಕೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಶಾಸಕರ ವಿರುದ್ಧ ಹೋರಾಟ ಮಾಡುತ್ತಿರುವವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಗ್ರಾಮದಲ್ಲಿ ಯಾರೂ ಶಾಸಕರ ವಿರುದ್ಧ ಹೋಗದಂತೆ ಭಯ ಹುಟ್ಟಿಸಲಾಗಿದೆ. ಜೈಲಿನಲ್ಲಿರುವ ಹೋರಾಟಗಾರರ ಕುಟುಂಬ ಸದಸ್ಯರು ಬೀದಿ ಪಾಲಾಗಿದ್ದಾರೆ. ಈಗ ನಮಗೆ ಇರಲು ಊರಿಲ್ಲ, ನೆಲೆಸಲು ಸೂರಿಲ್ಲ, ಮಕ್ಕಳ ಬದುಕಿಗೆ ದಾರಿ ಇಲ್ಲದಂತಾಗಿದೆ. ನಾವು ಸಂಬಂಧಿಕರ ಮನೆಯಲ್ಲಿ ದಿನ ದೂಡುವಂತಾಗಿದೆ. ಇಂತಹ ಗ್ರಾಮದಲ್ಲಿ ಜನರ ಒಡೆತನದಲ್ಲಿದ್ದ ಜಮೀನುಗಳಿಗೆ ಬೇಲಿ ಹಾಕಿ, ಜತೆಗೆ ನಮ್ಮ ಮನೆ ಮಠಗಳನ್ನು ನಾಶ ಮಾಡಲಾಗುತ್ತಿದೆ. ಪೊಲೀಸರ ವರ್ತನೆಯಿಂದ ನಮ್ಮ ಬದುಕು ಬೀದಿಗೆ ಬೀಳುತ್ತಿದೆ. ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಭಯ, ಆತಂಕ ಮನೆ ಮಾಡಿದೆ. ಮಾನವ ಹಕ್ಕುಗಳ ಆಯೋಗ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಹಾಗೂ ರಣೆ ಕೊಡಬೇಕೆಂದು ಮಹಿಳೆಯರು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಆಯೋಗದ ಸೂಚನೆ
ಭಾನುವಾರವಾದರೂ ಆಯೋಗದ ಅಧ್ಯ ಶ್ಯಾಮ್ಭಟ್ ಮಹಿಳೆಯರ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದರಿ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಆಯೋಗದ ನಿರ್ದೇಶನವನ್ನು ಹೇಗೆ ಪಾಲಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.