ಜಿಲ್ಲೆ

ಇತಿಹಾಸದಲ್ಲಿ ಅಜ್ಞಾತವಾದ ರಾಜಮನೆತನ ಸೋದೆ ಅರಸರು: ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಅಭಿಪ್ರಾಯ

Bengaluru - General - Rama Kishan K V

ಬೆಂಗಳೂರು: ಇತಿಹಾಸ ಜೀವನಕ್ಕೆ ಹಿಡಿದ ಕನ್ನಡಿ. ಇತಿಹಾಸ ಓದುಗರ ಸಂಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತಿದ್ದು, ಇತಿಹಾಸದ ಅಧ್ಯಯನದಲ್ಲಿ ಭಾರತೀಯ ಚಿಂತನೆಗೆ ಆಸ್ಪದ ಕಡಿಮೆಯಾಗುತ್ತಿದೆ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನದ ಜೊತೆಗೆ ಪ್ರಾದೇಶಿಕ ಇತಿಹಾಸದ ಕಡೆಗೆ ಹೆಚ್ಚಿನ ಗಮನ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಇತಿಹಾಸಕಾರ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಅಭಿಪ್ರಾಯಪಟ್ಟಿದ್ದಾರೆ.

ದಿ ಮಿಥಿಕ್ ಸೊಸೈಟಿಯು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ʼಸಾಮಂತರಾದರೂ ಶ್ರೀಮಂತ ಸಾಧನೆಯ ಸೋದೆಯ ಅರಸರುʼ ಎಂಬ ವಿಷಯ ಕುರಿತು ಮಾತನಾಡಿದರು.

ಸ್ವತಂತ್ರ ರಾಜರಷ್ಟೆ ಸಮರ್ಥವಾಗಿ ಆಡಳಿತ ನೀಡಿ ವಿಶಿಷ್ಟವಾದ ಕೊಡುಗೆಯನ್ನು ನೀಡಿದವರು ಸಾಮಂತರು. ಈ ದಿಸೆಯಲ್ಲಿ ವಿಜಯನಗರ ದೊರೆಗಳ ಸಾಮಂತರಾಗಿ ಸುಮಾರು 250ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಸೋದೆ ಅರಸರು ಪ್ರಮುಖರು. ಸಿರಸಿಯ ಬಳಿ ಇರುವ ಶಾಲ್ಮಲಾ ನದಿಯ ದಂಡೆಯ ಮೇಲಿರುವ ಸೋದೆ ಅವರ ಆಡಳಿತ ಕೇಂದ್ರವಾಗಿದ್ದಿತು. ಪ್ರಾಗೈತಿಹಾಸಿಕ ಕಾಲದಿಂದಲು ಪ್ರಸಿದ್ಧವಾಗಿರುವ ಸೋದೆಯು ನಾಲ್ಕು ಮತಗಳ ಕೇಂದ್ರವಾಗಿದ್ದಿತು. ವೆಂಕಟಪತಿರಾಯ ಸೋದೆಯ ರಾಜವಂಶದ ಸ್ಥಾಪಕನಾಗಿದ್ದರೆ,

ಇಮ್ಮಡಿ ಅರಸಪ್ಪನಾಯಕನು ಧರ್ಮಮಹಾಪ್ರಭು ಎಂದು ಪ್ರಸಿದ್ಧನಾಗಿದ್ದನು. ಸೋದೆ ಅರಸರಲ್ಲಿ ರಾಜವಂಶದ ಸದಾಶಿವರಾಯ ಒಬ್ಬ ಇತಿಹಾಸದಲ್ಲಿ ಮರೆತುಹೋದ ಮಹಾರಾಜ. ಕರ್ನಾಟಕದ ಇತಿಹಾಸದಲ್ಲಿ 1680ರಲ್ಲಿಯೇ ಬ್ರಿಟಿಷರನ್ನು ಕಾರವಾರದ ಬಳಿ ಸೋಲಿಸಿದ ಮೊದಲನೆಯ ದೊರೆಯಾಗಿದ್ದಾನೆ. ನಾಲ್ಕು ಭಾಷೆಗಳಲ್ಲಿ ಪ್ರಭುತ್ವವನ್ನು ಹೊಂದಿದ್ದ ಈತನ ಸಹೋದರಿಯೇ ಬೆಳವಡಿ ಮಲ್ಲಮ್ಮ. ಪ್ರಪಂಚದ ಇತಿಹಾಸದಲ್ಲಿ ಮೊದಲ ಮಹಿಳಾ ಸೇನೆ ರಚಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಸದಾಶಿವರಾಯನು ಸಿರಸಿಯಲ್ಲಿ ಮಾರಿಕಾಂಬ ದೇವಾಲಯವನ್ನು ನಿರ್ಮಿಸಿದನು.

ಪೋರ್ಚುಗೀಸರೊಡನೆ ಸೋದೆ ಅರಸರು ವಿಶಿಷ್ಟವಾದ ವ್ಯಾಪಾರ ಸಂಬಂಧಗಳನ್ನು ಬೆಳೆಸಿಕೊಂಡಿದ್ದರು. ಗೋವೆಯ ಬಾಂದೋರ್ಲಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಲು ಸೋದೆಯ ಅರಸರು ಪೋರ್ಚುಗೀಸರಿಗೆ ಅನುಮತಿ ನೀಡಿದ್ದರು. ಆದರೆ ದುರದೃಷ್ಟವಶಾತ್ ಕಾಲಾಂತರದಲ್ಲಿ ಸೋದೆಯ ಅರಸರು ತಮ್ಮ ರಾಜಕೀಯ ಪ್ರಭುತ್ವವನ್ನು ಕರ್ನಾಟಕದಲ್ಲಿ ಕಳೆದುಕೊಂಡ ನಂತರ ಅಲ್ಲಿಯೇ ನೆಲಸಬೇಕಾಯಿತು ಮತ್ತು ಈ ವಂಶಸ್ಥರು ಇಂದಿಗೂ ಅಲ್ಲಿಯೇ ನೆಲೆಸಿದ್ದಾರೆ ಮಾಹಿತಿ ಹಂಚಿಕೊಂಡರು.

ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಮಾತನಾಡಿ ಇತಿಹಾಸದ ಪುನರ್ ರಚನೆ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಇತಿಹಾಸ ಕುರಿತಂತೆ ಹೆಚ್ಚಿನ ಗಮನವನ್ನು ನೀಡುವುದರ ಜೊತೆಗೆ ನಮ್ಮ ದೇಶದಲ್ಲಿಯ ಸಾಂಸ್ಕೃತಿಕ ನಿರಂತತೆಗೆ ಹೆಚ್ಚಿನ ಗಮನವನ್ನು ನೀಡಬೇಕೆಂದು ಅಭಿಪ್ರಾಯಪಟ್ಟರು.

ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಎಂ.ಆರ್. ಪ್ರಸನ್ನ ಕುಮಾರ್, ಪ್ರೊ. ಎಂ.ಜಿ. ಚಂದ್ರಕಾಂತ್, ಪತ್ರಕರ್ತ ದು.ಗು. ಲಕ್ಷ್ಮಣ್, ಇತಿಹಾಸಕಾರ ಡಾ. ಚೂಡಾಮಣಿ ನಂದಗೋಪಾಲ್, ವಿಧಾನ ಪರಿಷತ್ತಿನ ಸದಸ್ಯೆ ತೇಜಸ್ವಿನಿ ಗೌಡ ಮುಂತಾದವರು ಉಪಸ್ಥಿತರಿದ್ದರು.