ಬೆಂಗಳೂರು: ಪ್ರಾಚೀನ ಕಾಲದಿಂದಲೂ ಸಾಂಸ್ಕೃತಿಕ ಬೃಹತ್ ಭಾರತದ ಇತಿಹಾಸವನ್ನು ಗಮನಿಸಿದರೆ ಭಾರತೀಯ ಸಂಸ್ಕೃತಿ ಮತ್ತು ಆಚರಣೆಯ ಪ್ರಭಾವವನ್ನು ವಿಶ್ವದಾದ್ಯಂತ ಕಾಣಬಹುದು. ಈ ರೀತಿ ಅನಾದಿಕಾಲದಿಂದಲೂ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿರುವ ಮತ್ತೊಂದು ರಾಷ್ಟ್ರ ಅಜರ್ ಬೈಜಾನ್ ಎಂದು ಭಾರತೀಯ ಸಂಸ್ಕೃತಿಯ ವಿದ್ವಾಂಸ ಡಾ. ಪ್ರಮೋದ್ ಪಾಠಕ್ ಅಭಿಪ್ರಾಯಪಟ್ಟಿದ್ದಾರೆ.
ದಿ ಮಿಥಿಕ್ ಸೊಸೈಟಿಯು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ 'ಅಗ್ನಿ ಭೂಮಿ - ಅಜರ್ ಬೈಜಾನ್: ಭಾರತೀಯ ಸಂಬಂಧಗಳು ಮತ್ತು ರೇಷ್ಮೆ ಮಾರ್ಗ' ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ರಾಜಧಾನಿಯಾದ ಬಾಕು ಮುಂತಾದ ಪ್ರದೇಶಗಳಲ್ಲಿ ದೊರೆಯುವ ಐತಿಹಾಸಿಕ ಸ್ಮಾರಕಗಳು, ಭಾಷೆ ಮತ್ತು ಅಲ್ಲಿರುವ ಆಚರಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ಸಂಸ್ಕೃತಿಯ ಪ್ರಭಾವವನ್ನು ಗಮನಿಸಬಹುದು. ಸುರಾಖಾನಿಯಲ್ಲಿರುವ ಅಗ್ನಿ ದೇವಾಲಯವು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ ಈ ದೇಶದಲ್ಲಿ ಸಂಸ್ಕೃತ, ಗುರುಮುಖಿ ಮತ್ತು ಫಾರ್ಸಿ ಭಾಷೆಯ ಸುಮಾರು 13 ಶಾಸನಗಳು ಪತ್ತೆಯಾಗಿವೆ. ಈ ದೇಶದಲ್ಲಿರುವ ಲಾಹಿಸ್ ಮತ್ತೊಂದು ಐತಿಹಾಸಿಕ ಗ್ರಾಮವಾಗಿದೆ.
ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ರೇಷ್ಮೆ ಮಾರ್ಗದಲ್ಲಿದ್ದ ಪ್ರಮುಖ ಪ್ರದೇಶ ಅಜರ್ ಬೈಜಾನ್ ಕಾಲಾಂತರದಲ್ಲಿ ಈ ಪ್ರದೇಶವು ಇಸ್ಲಾಂ ಧರ್ಮದ ಪ್ರಭಾವಕ್ಕೆ ಒಳಗಾದರೂ ಸಹ ತನ್ನ ಪಾರಂಪರಿಕ ಅಸ್ತಿತ್ವವನ್ನು ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.
ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಮಾತನಾಡಿ, ಆರ್ಯರ ವಲಸೆ ಸಿದ್ದಾಂತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಲಭ್ಯವಿರುವ ಹೊಸ ಐತಿಹಾಸಿಕ ಮಾಹಿತಿಯನ್ನು ಸಂಶೋಧಕರು ಗಮನಿಸುವುದರ ಜತೆಗೆ ಅದು ನಮ್ಮ ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ದು.ಗು. ಲಕ್ಷ್ಮಣ್, ಎಂ.ಆರ್. ಪ್ರಸನ್ನ ಕುಮಾರ್, ಪ್ರೊ. ಎಂ.ಜಿ. ಚಂದ್ರಕಾಂತ್, ಇತಿಹಾಸಕಾರ ಡಾ. ಚೂಡಾಮಣಿ ನಂದಗೋಪಾಲ್, ವಿಧಾನ ಪರಿಷತ್ತಿನ ಸದಸ್ಯೆ ತೇಜಸ್ವಿನಿಗೌಡ ಮುಂತಾದವರು ಉಪಸ್ಥಿತರಿದ್ದರು.