ಮೈಸೂರು: ನಾಡಹಬ್ಬ ದಸರಾ ಉತ್ಸವದ ಗಜಪಡೆಯ ಮಾವುತರು, ಕಾವಾಡಿಗರು ಹಾಗೂ ಕುಟುಂಬ ವರ್ಗದವರಿಗೆ ಅರಮನೆ ಮಂಡಳಿ ವತಿಯಿಂದ ಶುಕ್ರವಾರ ಅರಮನೆ ಆವರಣದಲ್ಲಿ ಉಪಾಹಾರ ನೀಡಲಾಯಿತು.
ಮಾವುತರು, ಕಾವಾಡಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉಪಾಹಾರ ಉಣಬಡಿಸಿದರು. ಈ ಸಂದರ್ಭ ಮಾವುತರು ಹಾಗೂ ಕಾವಾಡಿಗರ ಯೋಗಕ್ಷೇಮವನ್ನು ಸಚಿವರು ವಿಚಾರಿಸಿದರು. ಮಹದೇವಪ್ಪ ಹೋಳಿಗೆ ಬಡಿಸಿದರೆ, ಎಂಎಲ್ಸಿ ಸಿ.ಎನ್.ಮಂಜೇಗೌಡ ತುಪ್ಪ ಬಡಿಸಿದರು. ಇವರಿಗೆ ಶಾಸಕ ಕೆ.ಹರೀಶ್‌ಗೌಡ, ಎಂಎಲ್ಸಿ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಾಥ್ ನೀಡಿದರು.
ನಂತರ ತಟ್ಟೆ ಇಡ್ಲಿ, ಸಾಂಬಾರ್, ಚಟ್ನಿ, ಉದ್ದಿನವಡೆ, ಮಸಾಲೆದೋಸೆ, ಸಾಗು, ಟೊಮ್ಯಾಟೊ ಬಾತ್, ಕೇಸರಿಬಾತ್ ಬಡಿಸಲಾಯಿತು. ಬಳಿಕ ಸಚಿವ ಮಹದೇವಪ್ಪ ಮಾವುತರ ಸಾಲಿನಲ್ಲಿ ಕುಳಿತು ಉಪಾಹಾರ ಸೇವಿಸಿದರು.
ಸಂಸದ ಪ್ರತಾಪಸಿಂಹ, ಪಾಲಿಕೆ ಸದಸ್ಯರಾದ ರಜನಿ ಅಣ್ಣಯ್ಯ, ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಸಿಸಿಎಫ್ ಮಾಲತಿಪ್ರಿಯಾ, ಡಿಸಿಎಫ್ ಸೌರಭ್ ಕುಮಾರ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆಯುಷ್ ಇಲಾಖೆ ಹಾಗೂ ಅಪೊಲೋ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಚಿವ ಮಹದೇವಪ್ಪ ಶಿಬಿರ ಉದ್ಘಾಟಿಸಿದರು. ಮಾವುತರು ತಪಾಸಣೆ ಮಾಡಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಆಸ್ಪತ್ರೆಯ ನುರಿತ ವೈದ್ಯರು, ಸಿಬ್ಬಂದಿ ದಿನವಿಡೀ ಮಾವುತರು, ಕಾವಾಡಿಗಳು, ಅವರ ಮಕ್ಕಳಿಗೆ ಜ್ವರ, ಬಿಪಿ, ಶುಗರ್, ಮೈ-ಕೈ ನೋವು, ಹಲ್ಲು ನೋವು ಸೇರಿದಂತೆ ಹಲವು ತಪಾಸಣೆ ಮಾಡಿದರು.